More

    ಸಾಕು ಪ್ರಾಣಿಗಳಿಗೂ ಸನ್ ಸ್ಟ್ರೋಕ್

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ರಾಜ್ಯದಲ್ಲಿ ಸುಡು ಬಿಸಿಲು ಅಬ್ಬರಿಸುತ್ತಿದ್ದು, ದಿನೇ ದಿನೆ ತಾಪಮಾನ ಏರುತ್ತಲೇ ಇದೆ. ಈ ವೇಳೆ ಮನುಷ್ಯರಂತೆ ಪ್ರಾಣಿ, ಸಾಕು ಪ್ರಾಣಿಗಳಿಗೂ ಹೀಟ್ ಅಥವಾ ಸನ್ ಸ್ಟ್ರೋಕ್ ಆಗುವ ಸಾಧ್ಯತೆ ಇದೆ.

    ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ತಾಪಮಾನ ಹೆಚ್ಚಿದೆ. ಸೂರ್ಯನ ನೇರ ಪ್ರಖರತೆಯಿಂದಾಗಿ ಚರ್ಮ ಸಂಬಂಧಿತ ವಿವಿಧ ಕಾಯಿಲೆಗಳು ಸಾಕು ಪ್ರಾಣಿಗಳನ್ನೂ ಕಾಡುತ್ತಿವೆ. ವಿಪರೀತ ಉಷ್ಣ ಗಾಳಿಯಿಂದಾಗಿಯೂ ಇನ್ನಿತರೆ ಅನಾರೋಗ್ಯ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    2019ರಲ್ಲೂ ಸುಡು ಬಿಸಿಲು ಜಾನುವಾರುಗಳನ್ನು ಕಾಡಿತ್ತು. ಈ ವೇಳೆ ಕಾಸರಗೋಡು, ಕುಂಬಳೆ ಸೇರಿ ರಾಜ್ಯದ ಕೆಲವೆಡೆ ಸೂರ್ಯಾಘಾತಕ್ಕೆ ಒಳಗಾದ ನಿದರ್ಶನಗಳಿದ್ದು, ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾಗಿ, ಚಿಕಿತ್ಸೆಗೂ ಸ್ಪಂದಿಸದೆ, ಅಸುನೀಗಿದ್ದವು ಎಂಬ ಮಾಹಿತಿ ಇದೆ.

    ಈ ಬಾರಿ ರಾಯಚೂರು 44, ಬಳ್ಳಾರಿ 43, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಬೀದರ್, ವಿಜಯಪುರ 42, ತುಮಕೂರು, ಗದಗ, ದಾವಣಗೆರೆ, ಕೊಪ್ಪಳ, ವಿಜಯನಗರ 41, ಚಿತ್ರದುರ್ಗ 39-40 ಡಿಗ್ರಿ ಹೀಗೆ.. ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಉತ್ತರ ಕರ್ನಾಟಕ ಭಾಗವಷ್ಟೇ ಅಲ್ಲದೆ, ದಕ್ಷಿಣ ಕರ್ನಾಟಕದಲ್ಲೂ ಬಿಸಿಲಿನ ಪ್ರಕರತೆ ಹೆಚ್ಚುತ್ತಿದೆ. ಮೇವು ಮತ್ತು ನೀರಿನ ಕೊರತೆಯಿಂದ ಕೆಲವೆಡೆ ಸಾಕು ಪ್ರಾಣಿಗಳು ಅಸ್ವಸ್ಥಗೊಂಡಿವೆ. ಹೀಗಾಗಿ ಸೂರ್ಯ ಅಘಾತ ನೀಡುವ ಮುನ್ನ ರಕ್ಷಣೆ ಅಗತ್ಯವಿದೆ.

    ರಾಜ್ಯದ ಕೆಲವೆಡೆ ಮಳೆಯಾದರೂ ಬಿಸಿಲಿನ ಝಳ ಕಡಿಮೆಯಾಗಿಲ್ಲ. ಹೀಗಾಗಿ ಬೀದಿ ನಾಯಿಗಳು, ಬಿಡಾಡಿ ದನ-ಕರುಗಳು ನೆರಳಿನ ಆಶ್ರಯಕ್ಕೆ ಮೊರೆ ಹೋಗುತ್ತಿವೆ.

    ಮಾಲೀಕರು ಸಾಕು ಪ್ರಾಣಿಗಳ ಕುರಿತು ನಿರ್ಲಕ್ಷೆ ವಹಿಸಿ, ಒಂದು ವೇಳೆ ಸನ್ ಸ್ಟ್ರೋಕ್ ಉಂಟಾದಲ್ಲಿ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಬೇಸಿಗೆ ಅವಧಿ ಮುಗಿಯುವವರೆಗೂ ರಕ್ಷಣೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ.

    ರಕ್ಷಣೆಗೆ ಕ್ರಮಗಳೇನು?
    ಸುಡು ಬಿಸಿಲಲ್ಲಿ ಬಯಲು, ಗುಡ್ಡಗಾಡು ಪ್ರದೇಶಗಳಿಗೆ ಮೇಯಲು ಬಿಡಬಾರದು. ಹೊರಗಡೆ ಸುತ್ತಾಡಿಸಬಾರದು. ಸಾಕು ಪ್ರಾಣಿಗಳಿಗೂ ಹೇರಳವಾಗಿ ಶುದ್ಧ ನೀರು ಕುಡಿಸಬೇಕು. ಅನಾರೋಗ್ಯ ಕಂಡೊಂಡನೆ ಪಶು ವೈದ್ಯರನ್ನು ಸಂಪರ್ಕಿಸಬೇಕು. ಬಿಸಿಲು ಹೆಚ್ಚಿರುವ ಕಾರಣ ಶೇಡ್‌ಗಳಲ್ಲೂ ತಂಪಾದ ವಾತಾವರಣ ನಿರ್ಮಿಸಬೇಕು. ಮೇಲ್ಛಾವಣಿ ಶೀಟ್‌ಗಳಿಂದ ನಿರ್ಮಿಸಿದ್ದರೆ, ಅದರ ಮೇಲೆ ತೆಂಗಿನ ಗರಿಗಳನ್ನು ಹಾಕಬೇಕು. ಸಿಡಿಲಿನಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ಬಿಡಬಾರದು.

    ರಾಜ್ಯದಲ್ಲಿ ಸಾಕು ಪ್ರಾಣಿಗಳ ವಿವರ: 2019ರಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯಾದ್ಯಂತ ನಡೆದ 20ನೇ ಜಾನುವಾರು ಗಣತಿಯ ಅಂತಿಮ ವರದಿಯನ್ವಯ ಸಾಕು ಪ್ರಾಣಿಗಳ ಮಾಹಿತಿ ಇಂತಿದೆ. ದನ-84,69,004, ಎಮ್ಮೆ-29,84,560, ಕುರಿ-1,10,50,728, ಮೇಕೆ-61,69,392, ನಾಯಿ-12,88,864, ಹಂದಿ-3,23,836, ಕುದುರೆ-7,018, ಹೇಸರಗತ್ತೆ-51, ಕತ್ತೆ-8,790, ಮೊಲ-29,200, ಒಂಟೆ-33, ಆನೆ-77 ಸೇರಿ ಒಟ್ಟು 3,03,31,553 ಸಾಕು ಪ್ರಾಣಿಗಳಿವೆ. ಕುಕ್ಕುಟದಲ್ಲಿ 5,94,94,481 ಪ್ರಾಣಿಗಳಿವೆ.

    ಸಾಕು ಪ್ರಾಣಿಗಳನ್ನು ಬೇಸಿಗೆಯಲ್ಲಿ ನಿತ್ಯ ಮಧ್ಯಾಹ್ನ 12ರಿಂದ ಮಧ್ಯಾಹ್ನ 3.30ರವರೆಗೂ ಮೇಯಲು ಸೇರಿ ಇನ್ನಿತರೆ ಕಾರಣಕ್ಕೆ ಹೊರಗಡೆ ಕರೆದೊಯ್ಯಬಾರದು. ಪೌಷ್ಠಿಕ ಆಹಾರ ನೀಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯ ರಕ್ಷಣೆಗೂ ಸಹಕಾರಿಯಾಗಲಿದೆ ಎನ್ನುತ್ತಾರೆ ಬೆಂಗಳೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಂಟಿ ನಿರ್ದೇಶಕ ಪ್ರಸನ್ನಕುಮಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts