More

    ಸಾಂಪ್ರದಾಯಿಕ ಆಹಾರ ಪದ್ಧತಿಗೆ ಒತ್ತು ನೀಡೋಣ

    ಹುಣಸೂರು: ಇಂದಿನ ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶಗಳ ಕೊರತೆಯಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್ ಅಭಿಪ್ರಾಯಪಟ್ಟರು.

    ತಾಲೂಕಿನ ಬಿಳಿಕೆರೆ ಹೋಬಳಿ ಹಳೇಬೀಡು ಗ್ರಾಮದಲ್ಲಿ ಶುಕ್ರವಾರ ಯೋಜನೆ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯಗಳ ಬಳಕೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜೀವನಶೈಲಿ ನಮ್ಮ ಸಂಸ್ಕಾರಯುತ ಆಹಾರ ಪದ್ಧತಿಯನ್ನು ದೂರ ಮಾಡಿದೆ. ಇಂದಿನ ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶವೂ ಇಲ್ಲ, ಸಂಸ್ಕಾರ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪದ್ಧತಿಯನ್ನು ಕಾಣಲು ಸಾಧ್ಯವಿಲ್ಲ. ಸಿರಿಧಾನ್ಯಗಳ ಬಳಕೆ ನಮ್ಮ ಪೂರ್ವಜರ ಕೊಡುಗೆಯಾಗಿದೆ. ಅದನ್ನು ಮರೆತುಹೋದ ಕಾರಣ ಇಂದು ಹದಿಹರೆಯದವರಲ್ಲೂ ಆರೋಗ್ಯದ ಸಮಸ್ಯೆಗಳು ಕಾಡತೊಡಗಿವೆ. ಸಿರಿಧಾನ್ಯಗಳನ್ನು ಒಳಗೊಂಡ ಸಾಂಪ್ರದಾಯಿಕ ಆಹಾರ ಪದ್ಧತಿಗೆ ನಾವೆಲ್ಲರೂ ಒತ್ತು ನೀಡುವ ಮೂಲಕ ಸದೃಢ ಸಮಾಜವನ್ನು ಕಟ್ಟಬೇಕಿದೆ. ಯೋಜನೆಯ ಜ್ಞಾನವಿಕಾಸ ಕೇಂದ್ರದಿಂದ ನೀಡಲಾಗುವ ಶಿಕ್ಷಣ, ಆರೋಗ್ಯ, ಕೌಟುಂಬಿಕ ಸಾಮರಸ್ಯ ಮುಂತಾದವುಗಳನ್ನು ಅರಿತು ಮುನ್ನಡೆಯಬೇಕು ಎಂದು ಕೋರಿದರು.
    ಸಮುದಾಯ ಆರೋಗ್ಯಾಧಿಕಾರಿ ಮಂಜುಳಾ ಜಂಕ್‌ಫುಡ್‌ಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಸಿರಿಧಾನ್ಯಗಳನ್ನು ಬಳಕೆ ಮಾಡುವುದರಿಂದ ಅನಾರೋಗ್ಯದಿಂದ ದೂರವಿರಬಹುದು ಎಂದರು.

    ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರುತಿ, ತಾಲೂಕು ಯೋಜನಾಧಿಕಾರಿ ಬಿ.ಧನಂಜಯ, ಜಿಲ್ಲಾ ಸಿರಿ ಮಾರುಕಟ್ಟೆ ಮೇಲ್ವಿಚಾರಕ ಜಯಕೀರ್ತಿ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರುತಿ, ಬಿಳಿಕೆರೆ ವಲಯ ಮೇಲ್ವಿಚಾರಕಿ ವೀಣಾ, ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ, ಸೇವಾಪ್ರತಿನಿಧಿ ಕುಮಾರಿ, ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts