More

    ಸರ್ವಸಂಗ ಪರಿತ್ಯಾಗಿ ಚಿಕೇನಕೊಪ್ಪದ ಸಂತ

    ಗದಗ: ಗದಗ ತಾಲೂಕಿನ ಸುಕ್ಷೇತ್ರ ಬಳಗಾನೂರಿನಲ್ಲಿ ಫೆ. 19ರಂದು ಲಿಂ.ಚಿಕೇನಕೊಪ್ಪದ ಶ್ರೀ ಚನ್ನವೀರಶರಣರ 26ನೇ ಸ್ಮರಣೋತ್ಸವ ಆಯೋಜಿಸಲಾಗಿದೆ.

    ಪ್ರತಿ ವರ್ಷ ಗುರುಗಳ ಸ್ಮರಣೆಯ ಕಾರ್ಯವನ್ನು ಶ್ರೀ ಶಿವಶಾಂತವೀರ ಶರಣರು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಂಪ್ರದಾಯದ ಮೂಲಕ ಅತ್ಯಂತ ಸರಳವಾಗಿ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವ ಆಯೋಜಿಸಲಾಗುತ್ತಿದೆ. ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಹರ-ಗುರು ಚರಮೂರ್ತಿಗಳು ಪಾಲ್ಗೊಳ್ಳಲಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಾಧಕರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

    ಹಠಯೋಗಿ: ಭವದ ಬಂಧನಕ್ಕೊಳಗಾಗದೆ ಆಸೆ ಆಕಾಂಕ್ಷೆಗಳೆಲ್ಲವನ್ನೂ ಮೆಟ್ಟಿ ನಿಂತು ಅಧ್ಯಾತ್ಮದ ಆಳ ಅರಿಯುವ ಹಾಗೂ ತಿಳಿಸುವ ಮಹಾತ್ಮರ ಪಂಕ್ತಿಗಳಲ್ಲಿ ಚಿಕೇನಕೊಪ್ಪದ ಶ್ರೀ ಚನ್ನವೀರಶರಣರು ಅಗ್ರಗಣ್ಯರು. ಬಡತನ ಬೇಗೆಯಲ್ಲಿ ಬೆಂದು ಬಟ್ಟೆ ಇಲ್ಲದೆ ಬದುಕು ಸಾಗಿಸುವ ಬಡವರ ನೋವು ವೇದನೆ ಅರಿತು, ತಾವು ತೊಟ್ಟ ಬಟ್ಟೆಯನ್ನು ತ್ಯಜಿಸಿ ಬರಿ ಒಂದು ಪಂಚೆಯಲ್ಲಿಯೇ ಬದುಕು ಮುಗಿಸಿದ ಈ ಬರಿಮೈ ಸಂತ ನಡೆದದ್ದೆ ದಾರಿ, ಆಡಿದ್ದೇ ವೇದವಾಕ್ಯ.

    ಖಾನಯ್ಯ ಮತ್ತು ಶಿವಮ್ಮನವರ ಪುಣ್ಯಗರ್ಭದಲ್ಲಿ 1923, ಜೂ. 15ರಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕೇನಕೊಪ್ಪದಲ್ಲಿ ಜನಿಸಿದರು. ಅವರ ಪೂರ್ವಜರು ಚಿಕೇನಕೊಪ್ಪದಲ್ಲಿ ನೆಲೆನಿಂತ ಕಾರಣ ಈ ಗ್ರಾಮ ಶ್ರೀ ಚನ್ನವೀರಶರಣರ ಜನ್ಮಸ್ಥಳವಾಯಿತು. ಬಳಗಾನೂರಿನಲ್ಲಿ ಗೂಳರಡ್ಡಿಯವರು ಶರಣರಿಗೆ ಆಶ್ರಯ ನೀಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದರು. ಶಾಲೆಯಲ್ಲಿ ಅಭ್ಯಾಸಕ್ಕಿಂತ ಅವರಿಗೆ ಪಾರಮಾರ್ಥಿಕದ ಬಗೆಗೆ ಆಸಕ್ತಿ ಶುರುವಾಯಿತು. ಏಳನೇ ತರಗತಿ (ಮುಲ್ಕಿ) ಪೂರ್ಣಗೊಳಿಸಿದ ಚಂಡ್ರಯ್ಯ ಕನ್ನಡ ಕಲಿಸುವ ಶಿಕ್ಷಕರಾಗಿ ತಮ್ಮ ಜನ್ಮಸ್ಥಳ ಚಿಕೇನಕೊಪ್ಪದಲ್ಲಿ ಕೆಲಕಾಲ ನಿಂತರು. ಸಂಸಾರದ ಜಂಜಾಟದಿಂದ ದೂರ ಉಳಿಯಬೇಕೆಂಬ ದೃಢ ನಿರ್ಧಾರ ಮಾಡಿ ಹನ್ನೆರಡು ವರ್ಷಗಳ ಕಾಲ ಲೋಕ ಕಲ್ಯಾಣಕ್ಕಾಗಿ ಸಂಚಾರಗೈದರು. ಕಾಡಿನಲ್ಲಿ ಕಠೋರ ತಪಗೈದರು.

    ಚನ್ನವೀರ ಶರಣರು ಈ ಶತಮಾನದ ಸಿದ್ಧಿ ಪುರುಷರು. ಇಷ್ಟಲಿಂಗವನ್ನು ನಿರಂತರ ಪೂಜಿಸಿ ಅವರ ಕರಗಳಿಗೆ ಸ್ಪರ್ಶ ಸಿದ್ಧಿ ಪ್ರಾಪ್ತಿಯಾಗಿತ್ತು. ನೇರ ನಡೆ ನುಡಿಯ ನಿಲುವಿನ ಶರಣರು ಒಳಗಣ್ಣಿಗೆ ಗೋಚರಿಸುತ್ತಿದ್ದುದನ್ನು ಕಿಂಚಿತ್ತೂ ಮುಚ್ಚು ಮರೆಯಿಲ್ಲದೆ ಹೇಳಿ ಬಿಡುತ್ತಿದ್ದರು. ಕೈಯಲ್ಲಿ ಜಪಮಣಿ, ಬೆತ್ತ, ಬಗಲಲ್ಲಿ ಜೋಳಿಗೆ, ಕಾಲಲ್ಲಿ ಆವುಗೆ, ತಲೆಯಮೇಲೆ ಬಿಳಿಯ ಗೋಲ್ ಟೋಪಿ, ಕಣ್ಣಿಗೆ ಕಪ್ಪನೆಯ ಕನ್ನಡಕ, ನೀರಪಂಜೆ ಧರಿಸಿ ಸಂಚಾರ ಮಾಡುವ ಈ ಯೋಗಿಯ ವರ್ತನೆ ಸಂಪೂರ್ಣ ಭಿನ್ನವಾಗಿ ಕಂಡವು.

    ಇಂತಹ ಮಹಾತ್ಮ ಮುದೊಂದು ದಿನ ಬಳಗಾನೂರಿನಲ್ಲಿ ನೆಲೆನಿಂತು ಸುತ್ತಲಿನ ಅಸಂಖ್ಯಾತ ಭಕ್ತರಪಾಲಿನ ದೇವರಾದರು. ಇವರ ಲೀಲೆ ಪವಾಡಗಳನ್ನು ಅರಿತ ಭಕ್ತಜನ ಸಾಗರೋಪಾದಿಯಲ್ಲಿ ಶ್ರೀಮಠಕ್ಕೆ ಬರತೊಡಗಿದರು. ಅನೇಕ ವರ್ಷಗಳ ಕಾಲ ಭಕ್ತರು, ನಾಡು ಉದ್ಧರಿಸಿದ ಈ ಜ್ಯೋತಿ 1995 ಫೆ.6ರಂದು ಪ್ರಕಾಶದಲ್ಲಿ ಲೀನವಾಯಿತು. ಚನ್ನವೀರ ಶರಣರ ತಪಃಶಕ್ತಿಯನ್ನು ಪಡೆದ ಶಿವಶಾಂತವೀರ ಶರಣರು ನಿರಂತರ ಶಿವಾನುಭವ ಧಾರ್ವಿುಕ ಕಾರ್ಯಕ್ರಮಗಳ ಮೂಲಕ ಸದ್ಭಕ್ತರಲ್ಲಿ ಭಕ್ತಿ ಜ್ಞಾನ ಸದ್ಗುಣಗಳನ್ನು ಬೆಳೆಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ಸಂಸ್ಕಾರವನ್ನು ನೀಡುತ್ತ ಸಂಗೀತ, ಜ್ಯೋತಿಷ್ಯ, ವೈದಿಕ ಪಾಠಶಾಲೆಗಳನ್ನು ತೆರೆದು ನಾಡಿನ ಕಲೆ ಮತ್ತು ಸನಾತನ ವಿದ್ಯೆಗಳ ಪರಂಪರೆಯನ್ನು ಮುನ್ನಡೆಸಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ.

    ಇಂದಿನ ಕಾರ್ಯಕ್ರಮಗಳು: ಬೆಳಗ್ಗೆ 6 ಗಂಟೆಗೆ ಮೈನಳ್ಳಿ, ಬಿಕನಳ್ಳಿಯ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಲಿಂಗದೀಕ್ಷೆ, ಅಯ್ಯಾಚಾರ, ಬೆಳಗ್ಗೆ 10.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸಂಗಮ ಹಾಗೂ ಶರಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು. ಹೊಸಳ್ಳಿಯ ಶ್ರೀ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅರಹುಣಸಿಯ ನಿವೃತ್ತ ಶಿಕ್ಷಕ ಕೆ. ಬಿ. ಕಂಬಳಿ, ಗಾಯಕಿ ಕೊಪ್ಪಳದ ಗಂಗಮ್ಮ ಹಾಗೂ ಸಿಎ ಪರೀಕ್ಷೆಯಲ್ಲಿ ದೇಶಕ್ಕೆ 10ನೇ ರ್ಯಾಂಕ್ ಪಡೆದ ಗದಗ ಆದಿತ್ಯ ಅಡಿಗ ಅವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ಸಂಜೆ 5 ಗಂಟೆಗೆ ಮಹಾರಥೋತ್ಸವ, ಸಂಜೆ 6 ಗಂಟೆಗೆ ಧಾರ್ವಿುಕ ಚಿಂತನಗೋಷ್ಠಿ ಜರುಗುವುದು. ಕೊಪ್ಪಳ ಗವಿಮಠದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಸ್ವಾಮೀಜಿ, ಹರಳಕಟ್ಟಿ ಶಿವಾನಂದ ಮಠದ ಸದ್ಗುರು ದಯಾನಂದ ಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರ ಅಣದೂರಿನ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಗುಡದೂರಿನ ನೀಲಕಂಠ ತಾತನವರು, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತನವರು ಸಾನ್ನಿಧ್ಯ ವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts