More

    ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬೇಡಿಕೆ

    ಉಳ್ಳಾಗಡ್ಡಿ-ಖಾನಾಪುರ, ಬೆಳಗಾವಿ: ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದರಿಂದ ಯಮಕನಮರಡಿ ಕ್ಷೇತ್ರದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬೇಡಿಕೆ ಬಂದಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು. ಸಮೀಪದ ಯಮಕನಮರಡಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತೀಶ ಫೌಂಡೇಷನ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

    ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಹಲವು ಸಚಿವರು ನಮ್ಮ ಕ್ಷೇತ್ರಕ್ಕೆ ಬಂದು ಅಭಿವೃದ್ಧಿ ಕಾರ್ಯ ವೀಕ್ಷಿಸಿದ ನಿದರ್ಶನಗಳಿರುವುದು. ಕ್ಷೇತ್ರದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ದೇಶದಲ್ಲಿ ಸುಳ್ಳುಗಳಿಗೆ ಹೆಚ್ಚು ಮಹತ್ವವಿದೆ. ಸುಳ್ಳು ಹೇಳಿದವರು ಬೇಗ ಲೀಡರ್ ಆಗುತ್ತಾರೆ. ನಿಜ ಹೇಳುವವರಿಗೆ ಹೆಚ್ಚು ಸಂಕಷ್ಟವಿದೆ. ಆದರೆ, ಕೊನೆಗೆ ಅವರಿಗೆ ಯಶಸ್ಸು ದೊರಕುತ್ತದೆ. ಅಂದು ಅಂತರ್ಜಾತಿ ವಿವಾಹ ಮಾಡಿದ ಬಸವಣ್ಣ ಅವರಿಗೂ ಸಂಕಷ್ಟವಿತ್ತು. ಇತಿಹಾಸವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಮಹಾನ್ ಪುರುಷರ ದಾರಿಯಲ್ಲಿ, ಅವರ ವಿಚಾರಗಳನ್ನು ಪ್ರತಿಪಾದಿಸುವತ್ತ ನಡೆಯೋಣ ಎಂದರು.

    ಸಾನ್ನಿಧ್ಯ ವಹಿಸಿದ್ದ ಯಮಕನಮರಡಿ ಹುಣಸಿಕೊಳ್ಳಮಠದ ಶ್ರೀರಾಚೋಟಿ ಸ್ವಾಮೀಜಿ ಆಶೀರ್ವಚನ ನೀಡಿ, ಶಾಸಕ ಸತೀಶ ಜಾರಕಿಹೊಳಿ ಉತ್ತಮ ಕೆಲಸ ಮಾಡಿದ್ದಾರೆ. ಕುಳಿತು ಕೇಳುವವರು ಮಾತನಾಡುವುದನ್ನು ಸರಿಯಾಗಿ ಅರ್ಥ ಮಾಡ್ಕೊಬೇಕು. ಸದ್ಯದ ದಿನಮಾನಗಳಲ್ಲಿ ಬೇಕಾಗಿದ್ದನ್ನು ಅಳುಕಿಸಿ ಬೇಡವಾದುದನ್ನು ಬಿಂಬಿಸುವ ಕಾರ್ಯಗಳು ನಡೆಯುತ್ತಿವೆ. ವಿಚಾರವಂತರ ಕೊರತೆಯಿದೆ. ಅಜ್ಜಿಗೆ ಅಲುಗಾಡಿಸಿ ಔಷಧ ಕುಡಿಸು ಅಂದ್ರ ಅಜ್ಜಿಯನ್ನೇ ಅಲುಗಾಡಿಸಿ ಔಷಧ ಕುಡಿಸುವಂತಹ ಘಟನೆಗಳಿಂದು ನಡೆಯುತ್ತಿವೆ ಎಂದರು.

    ಕಾಲೇಜು ಕಮಿಟಿ ಉಪಾಧ್ಯಕ್ಷ ಈರಣ್ಣ ಬಿಸಿರೊಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ವಂದನಾ ತುಬಚಿ, ರಾಜು ಮಾರ‌್ಯಾಳಿ, ಪಾರೇಶ ಮಲಾಜಿ, ಅಸ್ಲಂ ಪಕಾಲಿ, ಭರಮಾ ದುಬದಾಳಿ, ಸಿದ್ದಪ್ಪ ಶಿಳ್ಳಿ, ಪ್ರಾಚಾರ್ಯ
    ಎಸ್.ಎ.ರಾಮನಕಟ್ಟಿ, ಎಸ್.ಐ.ಬೇಪಾರಿ, ಬಿ.ಪಿ.ಕೊಡ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts