More

    ಸರ್ಕಾರಿ ಭೂಮಿಯಲ್ಲಿ ಖಾಸಗಿಯವರ ರಸ್ತೆ, ಅಕ್ರಮ ದಾಖಲೆ ಸೃಷ್ಟಿಸಿ ಭೂಕಬಳಿಕೆ ಆರೋಪ, ನಿರ್ಮಾಣ ಸ್ಥಗಿತಗೊಳಿಸಲು ಗ್ರಾಮಸ್ಥರ ಆಗ್ರಹ

    ಹೊಸಕೋಟೆ: ತಾಲೂಕಿನ ಸಮೇತನಹಳ್ಳಿ ಗ್ರಾಪಂನ ಕೊರಳೂರು ಗ್ರಾಮದ ಸರ್ವೇ ನಂ. 34ರಲ್ಲಿ ಖಾಸಗಿ ಲೇಔಟ್ ನಿರ್ಮಾಣ ಮಾಡಲು ತಯಾರಿ ನಡೆದಿದೆ. ಈ ಲೇಔಟ್‌ಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಸರ್ಕಾರಿ ಗುಂಡು ತೋಪಿನಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಬಿಲ್ಡರ್ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಯಾವುದೇ ಅಧಿಕಾರಿಯಿಂದ ಅನುಮತಿ ಪಡೆಯದೆ ರಸ್ತೆ ನಿರ್ಮಿಸಲು ಬೃಹತ್ ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ತಕ್ಷಣವೇ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಕೊರಳೂರಿನ ಸರ್ವೇ ನಂ.7ರಲ್ಲಿ ಸರ್ಕಾರಿ ಗುಂಡು ತೋಪು ಇದೆ. ಇದಕ್ಕೆ ಹೊಂದಿಕೊಂಡಿರುವ ಸರ್ವೇ ನಂ.34 ಕೃಷಿ ಭೂಮಿಯಾಗಿದ್ದು, ಇಲ್ಲಿಯೇ ಲೇಔಟ್ ಮಾಡಲಾಗುತ್ತಿದೆ. ಈ ಮೊದಲು ಗುಂಡು ತೋಪಿನಲ್ಲಿ ಕಾಲುದಾರಿ ಇತ್ತು. ಹೊಲಗದ್ದೆಗಳಿಗೆ ಹೋಗಿಬರಲು ರೈತರು ಈ ಕಾಲುದಾರಿಯನ್ನೇ ಬಳಸುತ್ತಿದ್ದರು. ಆದರೀಗ ಖಾಸಗಿ ಲೇಔಟ್‌ಗೆ ನೇರವಾಗಿ ರಸ್ತೆ ಸಂಪರ್ಕ ಕಲ್ಪಿಸಲು ಸರ್ಕಾರಿ ಗುಂಡು ತೋಪು ಬಳಸಿಕೊಳ್ಳುತ್ತಿರುವುದು ಅಕ್ರಮ ಎಂಬುದು ಗ್ರಾಮಸ್ಥರ ಆರೋಪ. ಈ ಮೊದಲು ಲೇಔಟ್ ನಿರ್ಮಾಣಕಾರರು ರಸ್ತೆ ನಿರ್ಮಿಸಲು ಮುಂದಾದಾಗ ಗ್ರಾಮಸ್ಥರು ಪ್ರತಿಭಟನೆ ಮಾಡಿ, ಕಾಮಗಾರಿಯನ್ನು ನಿಲ್ಲಿಸಿದ್ದರು. ಜತೆಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು, ವಿಚಾರಣೆ ನಡೆಯುತ್ತಿದೆ. ಆದರೆ, ರಾಜಕೀಯ ಪ್ರಭಾವ ಬಳಸಿಕೊಂಡು ಬಿಲ್ಡರ್, ಕೋರ್ಟ್‌ನ ತಡೆಯಾಜ್ಞೆಯನ್ನೂ ವಿರೋಧಿಸಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದ್ದರಿಂದ, ಕಾಮಗಾರಿ ನಿಲ್ಲಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಕೊರಳೂರಿನ ಸರ್ವೇ ನಂ.7ರಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಆಂಜಿನಮ್ಮ, ಕಂದಾಯ ನಿರೀಕ್ಷಕಿ

    ರಸ್ತೆ ನಿರ್ಮಾಣ ಸಂಬಂಧ ಮಾಹಿತಿ ಬಂದಿದ್ದು, ಕಾಮಗಾರಿಗೆ ತಡೆ ನೀಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಯಾವುದೇ ಆದೇಶವಿದ್ದರೂ ಗುಂಡುತೋಪು ಉಳಿಸುವ ಸಲುವಾಗಿ ಕೂಡಲೇ ಆದೇಶ ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದು, ರದ್ದು ಮಾಡಿದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು.
    ಕೆ.ಎಂ. ಮಹೇಶ್‌ಕುಮಾರ್
    ತಹಸೀಲ್ದಾರ್, ಹೊಸಕೋಟೆ

    ಹೈಕೋರ್ಟ್‌ನಲ್ಲಿ ಪ್ರಕರಣ: 2019ರಲ್ಲಿ ಸಮೇತನಹಳ್ಳಿ ಪಂಚಾಯಿತಿಯಲ್ಲಿ ಸರ್ವಸದಸ್ಯರ ಸಭೆಯಲ್ಲಿ ಕೊರಳೂರು ಸರ್ವೇ ನಂ. 7 ಹಾಗೂ ಕೆ. ಮಲ್ಲಸಂದ್ರದ ಸರ್ವೇ ನಂ.43ರಲ್ಲಿ ರಸ್ತೆ ಅಭಿವೃದ್ಧಿಗೆ ಸರ್ವಸದಸ್ಯರ ಒಪ್ಪಿಗೆ ನಿರ್ಣಯ ಕೈಗೊಂಡಿರುವುದು ಕಾನೂನು ಬಾಹೀರವಾಗಿದೆ. ಈ ಬಗ್ಗೆ ತಹಸೀಲ್ದಾರ್, ಜಿಲ್ಲಾಧಿಕಾರಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದರೂ ಈ ವರೆಗೆ ಕ್ರಮ ವಹಿಸಿಲ್ಲ. ಆದ್ದರಿಂದ ಅಕ್ರಮವಾಗಿ ರಸ್ತೆ ನಿರ್ಮಾಣ ತಡೆಯಲು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಸ್ಥಳೀಯ ಗ್ರಾಪಂ ಸದಸ್ಯರೊಂದಿಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ, ಹೋರಾಟ ಮಾಡಲಾಗುತ್ತಿದೆ ಎಂದು ಹೆಸರೆಳಲಿಚ್ಛಿಸದ ಕೆ ಮಲ್ಲಸಂದ್ರ ಗ್ರಾಮಸ್ಥ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts