More

    ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

    ಲಕ್ಷ್ಮೇಶ್ವರ: ರಜೆ ಮೇಲೆ ಪಟ್ಟಣಕ್ಕೆ ಬಂದಿದ್ದ ಗಡಿ ಭದ್ರತಾ ಪಡೆಯ (ಬಿಎಸ್​ಎಫ್) ಯೋಧ ಸಂತೋಷ ಗಿರಿಯಪ್ಪ ಕಳ್ಳಿಮನಿ (38) ಬುಧವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಗುರುವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಕಳೆದ 18 ವರ್ಷಗಳಿಂದ ತ್ರಿಪುರಾದ ಬಟಾಲಿಯನ್​ನಲ್ಲಿ ಕಾನ್​ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮಾರ್ಚ್ 13ರಂದು ತ್ರಿಪುರಾದಿಂದ 15 ದಿನಗಳ ರಜೆ ಪಡೆದು ಪಟ್ಟಣಕ್ಕೆ ಬಂದಿದ್ದರು. ಕರೊನಾ ಲಾಕ್​ಡೌನ್​ನಿಂದಾಗಿ ಸೇವೆಗೆ ತೆರಳಲಾಗದೆ ಮನೆಯಲ್ಲಿಯೇ ಉಳಿಯಬೇಕಾಯಿತು. ಇತ್ತೀಚೆಗಷ್ಟೇ ಲಾಕ್​ಡೌನ್ ಸಡಿಲಿಕೆಯಾಗಿ ವಿಮಾನ ಹಾರಾಟ ಪ್ರಾರಂಭವಾಗಿದ್ದರಿಂದ ಇನ್ನೆರಡು ದಿನಗಳಲ್ಲಿ ಕರ್ತವ್ಯಕ್ಕೆಂದು ತ್ರಿಪುರಾಕ್ಕೆ ಪ್ರಯಾಣ ಬೆಳೆಸುವವರಿದ್ದರು. ಆದರೆ, ಮಂಗಳವಾರ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ವೈದ್ಯರಿಂದ ಪ್ರಥಮ ಚಿಕಿತ್ಸೆ ಪಡೆದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

    ಮುಗಿಲು ಮುಟ್ಟಿದ ಅಕ್ರಂದನ: ಹುಬ್ಬಳ್ಳಿಯಿಂದ ಪಾರ್ಥಿವ ಶರೀರವನ್ನು ಲಕ್ಷ್ಮೇಶ್ವರದ ಹಳೇ ಪೊಲೀಸ್ ಠಾಣೆ ಹತ್ತಿರವಿರುವ ಅವರ ಮನೆಗೆ ತಂದಾಗ ಕುಟುಂಬಸ್ಥರು, ಗೆಳೆಯರ ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಪತ್ನಿ ದೀಪಾ ಅವರಿಗೆ ಮೂರು ತಿಂಗಳ ಹಿಂದಷ್ಟೇ ಹೆರಿಗೆಯಾಗಿದ್ದು, ಅವರನ್ನು ತವರೂರು ಹೊಳೆಇಟಗಿಯಿಂದ ಗುರುವಾರ ನಸುಕಿನಲ್ಲಿ ಪಟ್ಟಣಕ್ಕೆ ಕರೆತರಲಾಯಿತು. ಮೃತ ಯೋಧನಿಗೆ ತಂದೆ-ತಾಯಿ, ಪತ್ನಿ, ಇಬ್ಬರು ಪುತ್ರಿಯರು ಹಾಗೂ 3 ತಿಂಗಳ ಹಿಂದೆ ಜನಿಸಿದ ಗಂಡುಮಗು, ಸಹೋದರಿ ಸೇರಿ ಅಪಾರ ಬಂಧು-ಬಳಗವಿದೆ.

    ಪಟ್ಟಣದ ರುದ್ರಭೂಮಿಯಲ್ಲಿ ಮೃತ ಯೋಧನ ಶರೀರಕ್ಕೆ ಸರ್ಕಾರದ ಪರವಾಗಿ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾಲಾರ್ಪಣೆ ಮಾಡಿ ನಮಿಸಿದರು. ಜಿಲ್ಲಾ ಪೊಲೀಸ್ ಪಡೆ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ತಾಲೂಕಾಡಳಿತದ ಪರವಾಗಿ ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ, ಸಿಪಿಐ ಮಹಾಂತೇಶ ಟಿ., ಪಿಎಸ್​ಐ ಶಿವಯೋಗಿ ಲೋಹಾರ ಅಂತಿಮ ಗೌರವ ಸಲ್ಲಿಸಿದರು. ನಂತರ ರೆಡ್ಡಿ ಸಮಾಜದ ವಿಧಿ-ವಿಧಾನಗಳ ಪ್ರಕಾರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts