More

    ಸಮ್ಮೇದ್ ಶಿಖರ್ಜಿ, ಪ್ರವಾಸಿ ತಾಣಕ್ಕೆ  ವಿರೋಧಿಸಿ ಜೈನ ಸಂಘದ ಪ್ರತಿಭಟನೆ

    ದಾವಣಗೆರೆ: ಜೈನರ ಯಾತ್ರಾ ಕೇಂದ್ರ, ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಶ್ರೀ ಸಮ್ಮೇದ್ ಶಿಖರ್ಜಿ ಕ್ಷೇತ್ರವನ್ನು ಪ್ರವಾಸಿ ತಾಣ ಘೋಷಣೆ ಹಿಂಪಡೆಯಲು ಆಗ್ರಹಿಸಿ ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

    ಜೈನ ಧರ್ಮದ ಬಾವುಟ ಕೈಲಿಡಿದ ಸಂಘದ ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು ಚೌಕಿಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ ಶ್ವೇತಾಂಬರ ದೇವಸ್ಥಾನದಿಂದ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲಿಗೆ ಧಾವಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
    ಜಾರ್ಖಂಡ್ ಸರ್ಕಾರವು ಪವಿತ್ರ ಯಾತ್ರಾ ಕೇಂದ್ರವನ್ನು ಪ್ರವಾಸಿ ಸ್ಥಳವೆಂದು ಘೋಷಿಸಿದ್ದು ಭಾರತದ ಅಲ್ಪಸಂಖ್ಯಾತ ಜೈನ ಸಮುದಾಯದ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದೆ. ಇದನ್ನು ಪ್ರವಾಸಿ ತಾಣವಾಗಿಸಿದರೆ ಸ್ಥಳದ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಗುಜರಾತ್‌ನ ಪಾಲಿಟಾನಾದ ರೋಹಿಶಾಲಾದಲ್ಲಿ ಐತಿಹಾಸಿಕ ದಾದಾ ಆದಿನಾಥ್ ಅವರ ಚರಣ ಪಾದುಕೆಗಳನ್ನು ಕಳೆದ ತಿಂಗಳಲ್ಲಿ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಜೈನ ಸಮಾಜದ ವಿರುದ್ಧ ಈ ಹೇಡಿ ಕೃತ್ಯ ಎಸಗಲಾಗಿದೆ. ಗುಜರಾತ್‌ನಲ್ಲಿನ ದೇಗುಲಗಳನ್ನು ರಕ್ಷಿಸಲು ಅಲ್ಲಿನ ಸರ್ಕಾರ ದಿಟ್ಟ ಕ್ರಮ ಕೈಗೊಂಡಿಲ್ಲ. ಈ ಬಗ್ಗೆಯೂ ಪ್ರಧಾನಿ ಗಮನ ಹರಿಸಬೇಕೆಂದು ಒತ್ತಾಯಿಸಿದರು.
    ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಛಗನ್‌ಲಾಲ್ ಜೈನ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಮಗದ ನಿರ್ದೇಶಕ ಗೌತಮ್ ಜೈನ್, ಸಮಾಜದ ಮುಖಂಡರಾದ ಅಶೋಕ ರೈ ಗಾಂಧಿ, ವಿಜಯ ಜೈನ್, ರಮೇಶ್ ಜೈನ್, ಸುನಿಲ್, ದಿಗಂಬರ ಜೈನ ಸಮಾಜದ ಮುಖಂಡರಾದ ಜಿತೇಂದ್ರ ಜೈನ್, ಚಂದ್ರಪ್ರಭು ಜೈನ್, ಸುನಿಲ್ ಜೈನ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts