More

    ಸಮಾಜ ಪರಿವರ್ತನೆ ಶ್ರೇಷ್ಠ ಸೇವೆ

    ಬೆಳ್ತಂಗಡಿ: ತಪ್ಪುದಾರಿಗೆ ಹೋದವರನ್ನು ಸರಿದಾರಿಗೆ ತರುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಮೂಲಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಇದೊಂದು ಕುಟುಂಬದಲ್ಲಿ ಬೆಳಕನ್ನು ಕಾಣುವ, ಸಮಾಜ ಪರಿವರ್ತನೆಯ ಶ್ರೇಷ್ಠ ಸೇವೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
    ಮಂಗಳವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ. ಓರ್ವ ಕುಡಿತಕ್ಕೆ ಬಲಿಯಾದರೆ ಅವನನ್ನು ನಂಬಿ ಬಂದ ಪತ್ನಿ, ಅವನ ತಂದೆ, ತಾಯಿ, ಮಕ್ಕಳು ಯಾವ ರೀತಿ ಜೀವನ ಕಳೆಯುತ್ತಾರೆ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಸ್ವರ್ಗ ಎಂಬುದನ್ನು ಬೇರೆಲ್ಲಿಯೂ ಹುಡುಕಾಡದೆ ಮನೆಯವರಿಗೆ ಮನೆಯಲ್ಲೇ ಸ್ವರ್ಗವನ್ನು ಕಾಣಿಸುವ ಕಾರ್ಯ ಮಾಡಬೇಕು ಎಂದರು.

    ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
    ಮದ್ಯ ವ್ಯಸನಿಗಳ ಮನಪರಿವರ್ತನೆ ಮಾಡಿ ವ್ಯಸನ ಮುಕ್ತರನ್ನಾಗಿ ಮಾಡಿದವರಿಗೆ ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ವಸಂತ ಸಾಲಿಯಾನ್ ಅವರನ್ನು ಡಾ.ಹೆಗ್ಗಡೆಯವರು ಗೌರವಿಸಿದರು. ಶಾಶ್ವತ ಪಾನಮುಕ್ತರಿಗೆ ಬ್ಯಾಡ್ಜ್ ನೀಡಲಾಯಿತು. ಜನಜಾಗೃತಿ ವೇದಿಕೆಗೆ 10 ಲಕ್ಷ ರೂ. ನೆರವನ್ನು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ.ರೋಹಿಣಿ ಹಸ್ತಾಂತರಿಸಿದರು.

    ಶಾಸಕ ಹರೀಶ್ ಪೂಂಜ, ಧ.ಗ್ರಾ. ಯೋಜನೆ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್, ನಿಕಟಪೂರ್ವ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ತಾಲೂಕು ಅಧ್ಯಕ್ಷೆ ಶಾರದಾ ರೈ ಉಪಸ್ಥಿತರಿದ್ದರು.
    ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್ ಪಾಸ್ ಸ್ವಾಗತಿಸಿದರು. ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ ವಂದಿಸಿದರು. ಯೋಜನಾಧಿಕಾರಿಗಳಾದ ಭಾಸ್ಕರ್ ಎಂ. ಮತ್ತು ನಾಗೇಶ್ ವೈ.ಎ. ಕಾರ್ಯಕ್ರಮ ನಿರ್ವಹಿಸಿದರು.

    3,037 ಮಂದಿ ಭಾಗಿ: 28 ವರ್ಷಗಳ ಹಿಂದೆ ಜನಜಾಗೃತಿ ವೇದಿಕೆ ಸ್ಥಾಪನೆಯಾಗಿದ್ದು, ಇದುವರೆಗೆ 1462 ಮದ್ಯವರ್ಜನ ಶಿಬಿರ ನಡೆದು 1,01,552 ಮಂದಿ ಮದ್ಯಮುಕ್ತರಾಗಿದ್ದಾರೆ. ಇವರನ್ನು ಎರಡು ವರ್ಷದವರೆಗೆ ಪ್ರತಿ ವಾರಕ್ಕೊಮ್ಮೆ ಸಭೆ ಮಾಡಿ ಧೈರ್ಯ ತುಂಬಿಸಲಾಗುತ್ತಿದೆ. 100 ದಿನದ ಬಳಿಕ ಧರ್ಮಸ್ಥಳಕ್ಕೆ ಕರೆಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ, ಡಾ.ಹೆಗ್ಗಡೆಯವರ ಭೇಟಿ ಮಾಡಿಸಲಾಗುತ್ತಿದೆ. ಮಂಗಳವಾರದ ಕಾರ್ಯಕ್ರಮದಲ್ಲಿ 3,037 ನವಜೀವನ ಸದಸ್ಯರು, 2300 ಕುಟುಂಬಸ್ಥರು ಭಾಗಿಯಾಗಿದ್ದರು ಎಂದು ವಿವೇಕ್ ವಿನ್ಸೆಂಟ್ ಪಾಸ್ ತಿಳಿಸಿದರು.

     ಮದ್ಯಕ್ಕೆ ಒಳಗಾದವರು ಸ್ವಂತಿಕೆ ಮರೆಯುತ್ತಾರೆ. ಕುಡಿತದ ಆಸೆಗಾಗಿ ಕುಡಿತಕ್ಕೊಳಗಾದವರು ಇನ್ನೊಬ್ಬರ ಪ್ರಾಣವನ್ನು ತೆಗೆಯಲು ಮುಂದಾದಂತಹ ಘಟನೆಗಳೂ ಇವೆ. ಅದಕ್ಕಾಗಿ ದುಶ್ಚಟವೆಂಬುದು ಶಾಪವಾಗಿದೆ. ದುಶ್ಚಟಮುಕ್ತರಾಗಿ ತಮ್ಮ ಕುಟುಂಬವನ್ನು ಪವಿತ್ರ ಕುಟುಂಬವನ್ನಾಗಿ ಮಾಡಿ.
    – ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

    ದುಶ್ಚಟಕ್ಕೆ ಒಳಗಾದ ವ್ಯಕ್ತಿಗಳು ನೋಯಿಸುವವರ ಸಂಖ್ಯೆಗಿಂತ ನೊಂದವರ ಸಂಖ್ಯೆಯೇ ಹೆಚ್ಚಾಗಿದೆ. ಕುಡಿತ ಎಂಬುದು ಜಾತಿ ಇಲ್ಲದ ರೋಗವಾಗಿದೆ. ಕುಡಿತದಿಂದ ಮನುಷ್ಯ ಸಾಯುವುದಲ್ಲದೆ ಮಾನವೀಯತೆಯೂ ಸಾಯುತ್ತದೆ.
    – ಹೇಮಾವತಿ ವಿ. ಹೆಗ್ಗಡೆ, ಧರ್ಮಸ್ಥಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts