More

    ಸಮಾಜದಲ್ಲಿ ಬೇರೂರಿದೆ ಲಿಂಗ ತಾರತಮ್ಯ ; ಲೇಖಕಿ ಡಾ.ಲೀಲಾ ಸಂಪಿಗೆ ಅಸಮಾಧಾನ

    ತುಮಕೂರು: ಸಮಾಜದಲ್ಲಿ ಲಿಂಗ ತಾರತಮ್ಯ ಬೇರೂರಿದ್ದು, ಗರ್ಭದಲ್ಲಿಯೇ ಹೆಣ್ಣು ಭ್ರೂಣಗಳ ಘೋರಿ ಕಟ್ಟಲಾಗುತ್ತಿದೆ ಎಂದು ಲೇಖಕಿ ಡಾ.ಲೀಲಾ ಸಂಪಿಗೆ ಬೇಸರ ವ್ಯಕ್ತಪಡಿಸಿದರು.

    ವರದಕ್ಷಿಣೆ ವಿರೋಧಿ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಸಮರ್ಥ್ ಫೌಂಡೇಷನ್ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಂಗಮಾಳಮ್ಮ ಗಂಗಾಧರಯ್ಯ ನೆನಪಿನ ಮಹಿಳಾ ಚೇತನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
    ಪ್ರಸ್ತುತ ಒಂದು ಸಾವಿರ ಜನಸಂಖ್ಯೆಗೆ 920 ಹೆಣ್ಣು ಮಕ್ಕಳಿದ್ದಾರೆ. ಅಂದರೆ, ಶೆ. 80 ಲಿಂಗಾನುಪಾತ ಕಡಿಮೆಯಾಗಿದೆ, ಈ ಅಸಮತೋಲನ ಹೀಗೆಯೇ ಮುಂದುವರಿದರೆ ಮುಂದೆ ಸಾಮಾಜಿಕ ಅಸಮತೋಲನ ಮತ್ತಷ್ಟು
    ಹೆಚ್ಚಳವಾಗಲಿದೆ ಎಂದರು.

    ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣಾ ವೆಂಕಟನಂಜಪ್ಪ ಮಾತನಾಡಿ, ಮನೆಯಲ್ಲಿ ಬಾಲೆಯಾಗಿ, ಗಂಡನ ಮನೆಯಲ್ಲಿ ಮಡದಿಯಾಗಿ, ಆನಂತರ ತಾಯಿಯಾಗಿ ಹೀಗೆ ಹಲವು ಪಾತ್ರಗಳನ್ನು ಮಹಿಳೆ ನಿರ್ವಹಿಸುತ್ತಾಳೆ. ಹುಟ್ಟಿದಾಗಿನಿಂದ ಸಾಯುವ ತನಕ ದುಡಿಮೆ ಮತ್ತು ಸಂಕಷ್ಟಗಳ ಸಂಕೋಲೆಯಲ್ಲಿಯೇ ಆಕೆ ಮುಂದೆ ಸಾಗಬೇಕಿದೆ. ಕಷ್ಟಗಳು ಎದುರಾದಾಗ ಅವುಗಳನ್ನು ಎದುರಿಸುವ ಧೈರ್ಯಗಾರಿಕೆ ಮಹಿಳೆಯರಲ್ಲಿ ಬರಬೇಕು ಎಂದರು. ವರದಕ್ಷಿಣೆ ವಿರೋಧಿ ವೇದಿಕೆ ಉಪಾಧ್ಯಕ್ಷೆ ಎಂ.ಸಿ.ಲಲಿತಾ, ಸಮರ್ಥ್ ಫೌಂಡೇಷನ್ ಕಾರ್ಯದರ್ಶಿ ರಾಣಿ ಚಂದ್ರಶೇಖರ್, ವೇದಿಕೆ ಮಾಜಿ ಅಧ್ಯಕ್ಷೆ ಎಂ.ಬಿ.ಜೀವರತ್ನಾ, ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಪದಾಧಿಕಾರಿಗಳಾದ ಸಿ.ಎಲ್.ಸುನಂದಮ್ಮ, ಗೀತಾ ನಾಗೇಶ್, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಕಾರ್ಯದರ್ಶಿ ಡಾ.ಅರುಂಧತಿ ಇದ್ದರು.

    ವಿವಿಧ ಪುರಸ್ಕಾರ ನೀಡಿಕೆ : ಗಂಗಮಾಳಮ್ಮಗಂಗಾಧರಯ್ಯ ನೆನಪಿನ ಮಹಿಳಾ ಚೇತನ ಪ್ರಶಸ್ತಿ ಡಾ.ಲೀಲಾಸಂಪಿಗೆ ಹಾಗೂ ಟಿ.ಎ.ಗಂಗಮ್ಮ ಅವರಿಗೆ, ಚನ್ನಮ್ಮ ಚನ್ನರಾಯಪ್ಪ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿ ಶೈಲಜಾ ಎಚ್.ವಿಠಲ್ ಹಾಗೂ ಲಕ್ಷ್ಮಮ್ಮ ಲೇಪಾಕ್ಷಯ್ಯ ಅವರಿಗೆ, ಸರೋಜಾ ಟಿ.ಆರ್.ರೇವಣ್ಣ ಶ್ರಮಜ್ಯೋತಿ ಪ್ರಶಸ್ತಿ ಆರ್.ಅರುಣ ಮತ್ತು ಡಿ.ಆರ್.ಮಮತಾ ಅವರಿಗೆ ಪ್ರದಾನ ಮಾಡಲಾಯಿತು. ವರದಕ್ಷಿಣೆ ವಿರೋಧಿ ವೇದಿಕೆ ಸದಸ್ಯರಾದ ಟಿ.ಆರ್.ಅನಸೂಯ ಹಾಗೂ ಲಲಿತಾಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಸಮರ್ಥ್ ಫೌಂಡೇಷನ್ ತರಬೇತಿ ವಿದ್ಯಾರ್ಥಿನಿಯರಿಂದ ನಾಟಕ ಪ್ರದರ್ಶನ, ತುಮಕೂರು ವಿವಿ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು ಹಾಗೂ ಸಾಂತ್ವನ ಕೇಂದ್ರದ ತಂಡದಿಂದ ಕಿರು ನಾಟಕ, ಮೂಕಾಭಿನಯ ಹಾಗೂ ಜಾಗೃತಿ ಗೀತೆಗಳು ಹೆಚ್ಚು ಗಮನ ಸೆಳೆದವು.

    ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವೂ ಇದೆ, ಮಹಿಳೆಯರು ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಿದಾಗ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ, ಮಹಿಳಾ ದಿನಾಚರಣೆ ಸಂದರ್ಭದಲ್ಲಿಯಾದರೂ ಮಹಿಳೆಯರ ಸಮಸ್ಯೆಗಳು ಮತ್ತು ಸವಾಲುಗಳನ್ನು ಅರಿಯುವ, ಪರಿಹಾರ ಹುಡುಕುವ ಚಿಂತನೆ ನಡೆಯಬೇಕು.
    ಬಾ.ಹ.ರಮಾಕುಮಾರಿ ಕಸಾಪ ಜಿಲ್ಲಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts