More

    ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಾಕೀತು, ಸೂಲಿಬೆಲೆಯ ಅಂಬೇಡ್ಕರ್ ಕಾಲನಿಯಲ್ಲಿ ಪರಿಶೀಲನೆ

    ಸೂಲಿಬೆಲೆ: ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಕಸ ವಿಲೇವಾರಿ, ರಸ್ತೆ ಸೇರಿ ಮೂಲಸೌಕರ್ಯಗಳಿಗೆ ಒತ್ತು ನೀಡಬೇಕು. ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಾಕೀತು ಮಾಡಿದರು.

    ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಶನಿವಾರ ರಾತ್ರಿ ಸೂಲಿಬೆಲೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಜಿಲ್ಲಾಧಿಕಾರಿ ಭಾನುವಾರ ಬೆಳಗ್ಗೆ ಗ್ರಾಮದ ಅಂಬೇಡ್ಕರ್ ಕಾಲನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದು, ಸ್ವಚ್ಛತೆ ಬಗ್ಗೆ ನಿಗಾ ವಹಿಸದಿರುವುದನ್ನು ಗಮನಿಸಿ ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಜನ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂಮಟ್ಟದಲ್ಲೇ ಇಂಥ ಸಮಸ್ಯೆ ಬಗೆಹರಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ತಾಕೀತು ಮಾಡಿದರು.

    ದಲಿತ ಕಾಲನಿಯಲ್ಲಿ ಉಪಾಹಾರ: ಸೂಲಿಬೆಲೆಯ ದಲಿತರ ಕಾಲನಿಯಲ್ಲಿ ಮುಂಜಾನೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ್ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ದಲಿತ ಕಾಲನಿಯ ಮನೆಯೊಂದರಲ್ಲಿ ಉಪಾಹಾರ ಸೇವಿಸಿ ಸ್ಥಳದಲ್ಲೇ ಜನರ ಅಹವಾಲು ಸ್ವೀಕರಿಸಿದರು.

    ಪಿಡಿಒಗೆ ಸೂಚನೆ: ಕಾಲನಿಯಲ್ಲಿ ಅಗತ್ಯವಿರುವ ಚರಂಡಿ, ರಸ್ತೆ ಹಾಗೂ ಶೌಚಗೃಹ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಸೂಲಿಬೆಲೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಂದರ್ ಅವರಿಗೆ ಸೂಚನೆ ನೀಡಿದರು. ನೀಡಿದ ಗಡುವಿನೊಳಗೆ ಕೆಲಸ ಮುಗಿಸಿ ವರದಿ ನೀಡುವಂತೆ ತಾಕೀತು ಮಾಡಿದರು.

    ಜಿಲ್ಲಾಡಳಿತವೇ ಮನೆ ಬಾಗಿಲಿಗೆ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ, ಜಿಲ್ಲಾಡಳಿತವೇ ಮನೆ ಬಾಗಿಲಿಗೆ ಬರುವ ವಿನೂತನ ಪ್ರಯೋಗ ಯಶಸ್ವಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ್ ಹೇಳಿದರು. ಕೆಲವು ಕಡೆಗಳಲ್ಲಿ ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಮಾಹಿತಿ ಕೊರತೆ ಇರುತ್ತದೆ. ಈ ಬಗ್ಗೆ ಸ್ಥಳೀಯವಾಗಿ ಗ್ರಾಪಂ ಮಟ್ಟದಲ್ಲೇ ಅರಿವು ಮೂಡಿಸಬೇಕು, ಗ್ರಾಮ ಸಭೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಬೇಕು, ಗ್ರಾಮಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts