More

    ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ

    ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳಿಗೆ ಪ್ರವಾಹ ಎದುರಾದರೆ ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

    ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಾಹ ಮುನ್ನೆಚ್ಚರಿಕೆ ಕುರಿತು ಉಪವಿಭಾಗ ಮಟ್ಟದ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ, ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕಿನ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರವಾಹ ಪೀಡಿತ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಿ, ಸರಿಯಾಗಿ ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಬೇಕು ಎಂದರು.

    ಕೊಯ್ನ ಮತ್ತು ಇತರೆ ಜಲಾಶಯಗಳ ಮೇಲೆ ನಿಗಾ ಇಡಬೇಕು. ಕಳೆದ ಪ್ರವಾಹದಲ್ಲಿ ಮಾಡಿರುವ ತಪ್ಪುಗಳು ಈಗ ಮತ್ತೆ ಮರುಕಳಿಸಬಾರದು. ಎಲ್ಲ ಇಲಾಖೆಗಳು ಜಂಟಿಯಾಗಿ ಕೆಲಸ ಕಾರ್ಯ ನಿರ್ವಹಿಸಬೇಕು. ಒಬ್ಬರ ಮೇಲೆ ಜವಾಬ್ದಾರಿ ಹಾಕಿ ಜಾರಿಕೊಳ್ಳುವ ಮನೋಭಾವ ತೆಗೆದುಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಉಂಟಾಗುವ ಮುನ್ಸೂಚನೆ ಇಲ್ಲ. ಆದರೂ ಮುಂದಿನ ವಾರದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ನದಿಗಳಿಗೆ ನೀರು ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

    ಅರ್ಹ ಲಾನುಭವಿಗಳಿಗೆ ಮನೆ ಸಿಗುವ ಹಾಗೇ ನೋಡಿಕೊಳ್ಳಬೇಕು. ಯಾರ ಒತ್ತಡಕ್ಕೆ ಮಣಿದು ಮಣಿದು ಮನೆ ಇದ್ದವರಿಗೂ ಮನೆ ಕೊಡುವ ವ್ಯವಸ್ಥೆ ನಿಲ್ಲಬೇಕು. 2021 ರಲ್ಲಿ ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡುವಲ್ಲಿ ಕೆಲವು ಅಧಿಕಾರಿಗಳು ತಾರತಮ್ಯ ಮಾಡಿದ್ದರಿಂದ ನನೆಗುದಿಗೆ ಬಿದ್ದ ಎ, ಬಿ, ಮತ್ತು ಸಿ ಕೇಟಗೇರಿಯ 4191 ಲಾನುಭವಿಗಳಿಗೆ ಮನೆಗಳು ಮಂಜೂರಾಗಿವೆ. ಪ್ರವಾಹದಲ್ಲಿ ಮನೆ ಕಳೆದುಕೊಂಡ ಅರ್ಹ ಲಾನುಭವಿಗಳಿಗೆ ಸರ್ಕಾರದ ಪರಿಹಾರ ಹಾಗೂ ಮನೆ, ಬೆಳೆ ಪರಿಹಾರ ಕೊಡಬೇಕು. ಪರಿಹಾರ ನೀಡುವಲ್ಲಿ ಪಕ್ಷ ಭೇದ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರವಾಹ ಪೀಡಿತ ಗ್ರಾಮಗಳಿಗೆ ಪರಿಹಾರ ನೀಡಲು ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಪರಿಹಾರದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣದ ಹಕ್ಕು ಪತ್ರ ನೀಡಲಾಗುವುದು ಎಂದರು.

    ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಮಾತನಾಡಿ, ನದಿ ದಡದಲ್ಲಿ ಕೆಲವು ಕಿಡಿಗೇಡಿಗಳು ಸೆಲ್ಫಿ ತೆಗೆದುಕೊಳ್ಳಲು ಹೋಗುತ್ತಿದ್ದಾರೆ. ಅದರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಅಧಿಕಾರಿಗಳು ಕಡ್ಡಾಯವಾಗಿ ಮನೆ ಕಳೆದುಕೊಂಡವರ 1 ನಿಮಿಷ ವಿಡಿಯೋ ಹಾಗೂ ಅವರ ಜಿಪಿಎಸ್ ಮಾಡಬೇಕು ಎಂದು ಹೇಳಿದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಗೋಕಾಕ ಡಿವೈಎಸ್‌ಪಿ ಮನೋಜಕುಮಾರ ನಾಯಿಕ, ಅಥಣಿ ಡಿವೈಎಸ್‌ಪಿ ಗಿರೀಶ ಎಸ್.ವಿ., ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ. ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ, ಡಾ.ಎಸ್.ಎಸ್.ಗಡೇದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts