More

    ಸಮಗ್ರ ತನಿಖೆ ನಡೆಸಲು ಒತ್ತಾಯ

    ರೋಣ: ಸಾಮಾಜಿಕ ಅರಣ್ಯ ಇಲಾಖೆಯಿಂದ ಗುಂಡಿ ತೋಡುವ ಹಾಗೂ ಸಸಿ ನೆಡುವ ಯೋಜನೆಯಲ್ಲಿ ತಾಲೂಕಿನಾದ್ಯಂತ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಇದರ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಪ್ರಭು ಮೇಟಿ ಒತ್ತಾಯಿಸಿದ್ದಾರೆ.

    ತಾಲೂಕಿನ ಇಟಗಿ-ಮುಗಳಿ ರಸ್ತೆಯೊಂದರಲ್ಲಿಯೇ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿ ನೆಡಲು ತೋಡಲಾಗಿರುವ ಗುಂಡಿಯಲ್ಲಿ ಲಕ್ಷಾಂತರ ರೂ. ಹಾಗೂ ತಾಲೂಕಿನಾದ್ಯಂತ ಗುಂಡಿ ತೋಡುವ ಹಾಗೂ ಸಸಿ ನೆಡುವಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದರು.

    ತಾಪಂ ಸದಸ್ಯ ಮೇಟಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಇಟಗಿಯಿಂದ ಮುಗಳಿವರೆಗಿನ ರಸ್ತೆಗೆ ಕರೆದೊಯ್ದು ಈ ದಾರಿಯುದ್ದಕ್ಕೂ 900 ಗುಂಡಿಗಳನ್ನು ತೋಡಿ 1,46,700 ರೂ.ಗಳ ಬಿಲ್ ತೆಗೆಯಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಒಂದು ಗುಂಡಿ ತೆಗೆಸಲು 167 ರೂ. ಕೊಡಲಾಗಿದೆ. ಇದರಲ್ಲಿ ಎರಡೂವರೆ ಚದರ ಅಡಿ ಗುಂಡಿ ತೋಡಬೇಕು. ಆದರೆ, ಈ ನಿಯಮವನ್ನು ಗಾಳಿಗೆ ತೂರಿ ಜೆಸಿಬಿ ಮೂಲಕ ಒಂದು ಗುಂಡಿಗೆ 35 ರೂ.ಗಳನ್ನು ನೀಡಿ ಯಾವುದೇ ಅಳತೆ ಇಲ್ಲದಂತೆ ಕೇವಲ ಅರ್ಧ, ಒಂದು ಅಡಿಯಷ್ಟು ಗುಂಡಿ ತೋಡುವ ಮೂಲಕ ಒಂದೂವರೆ ಲಕ್ಷ ರೂ. ಗಳವರೆಗೆ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದರು.

    ಅರಣ್ಯ ಇಲಾಖೆ ನಿಯಮಾವಳಿ ಪ್ರಕಾರ ಯಾವುದೇ ಗಿಡಗಳನ್ನು ಎರಡೂವರೆ ಚದರಡಿ ಗುಂಡಿ ತೋಡಿ, ಅದಕ್ಕೆ ಸೊಪ್ಪು, ಸೆದೆ, ಸಾವಯವ ಗೊಬ್ಬರ ತುಂಬಿ ನೆಡಬೇಕು, ಸಸಿ ನೆಟ್ಟ ಮೇಲೆ ಪ್ರಾಣಿಗಳಿಂದ ರಕ್ಷಿಸಲು ಸಸಿಯ ಸುತ್ತಲೂ ಮುಳ್ಳು ಬೇಲಿ ಹಚ್ಚಬೇಕು. ಗಾಳಿ-ಮಳೆಗೆ ಸಸಿಗಳು ಅಲುಗಾಡದಂತೆ ಒಂದು ಸಸಿ ಇರುವಷ್ಟು ಎತ್ತರ ಒಂದು ಕೋಲನ್ನು ಸಸಿಗೆ ಆಧಾರವಾಗಿ ಕಟ್ಟಬೇಕು ಆದರೆ, ಹೀಗೆ ಮಾಡಿದ ಒಂದು ಕುರುಹು ನನ್ನ ಕ್ಷೇತ್ರದಲ್ಲಿ ಎಲ್ಲೂ ಕಂಡು ಬಂದಿಲ್ಲ. ಕಾರಣ ಅರಣ್ಯ ಬೆಳೆಸುವ ನೆಪದಲ್ಲಿ ಪ್ರತಿ ವರ್ಷ ಕೋಟ್ಯಂತರ ರೂ. ವಿನಾಕಾರಣ ವ್ಯರ್ಥ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಐದು ವರ್ಷಕೊಮ್ಮೆ ಪ್ಲಾಂಟೇಷನ್

    ಒಂದು ರಸ್ತೆಗೆ ಅರಣ್ಯ ಇಲಾಖೆಯಿಂದ ಪ್ಲಾಂಟೇಷನ್ ಮಾಡಿದರೆ ಕನಿಷ್ಠ ಐದು ವರ್ಷಗಳವರೆಗೆ ಆ ರಸ್ತೆಯಲ್ಲಿ ಪ್ಲಾಂಟೇಷನ್ ಮಾಡುವಂತಿಲ್ಲ. ಆದರೆ, ಇದೇ ಇಟಗಿ- ಮುಗಳಿ ರಸ್ತೆಯಲ್ಲಿ 2016-17ನೇ ಸಾಲಿನಲ್ಲಿ ಪ್ಲಾಂಟೇಷನ್ ಮಾಡಲಾಗಿತ್ತು. ಮತ್ತೇ ಇದೇ ರಸ್ತೆಯಲ್ಲಿ ಗುಂಡಿಗಳನ್ನು ತೋಡಿ ಪ್ಲಾಂಟೇಷನ್ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಈ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಜಿಲ್ಲಾ ಕೇಂದ್ರದಿಂದ ಒಬ್ಬ ಹಿರಿಯ ಅಧಿಕಾರಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಿ ಪರೀಕ್ಷಿಸಲಾಗುವುದು. ಅರಣ್ಯ ಇಲಾಖೆಯ ನಿಯಮಾವಳಿ ಪ್ರಕಾರ ಗುಂಡಿಗಳನ್ನು ತೋಡಿಸದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಯ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.

    | ಎಸ್.ಬಿ. ನಾಗಶೆಟ್ಟಿ ಜಿಲ್ಲಾ ಅರಣ್ಯಾಧಿಕಾರಿ

    ಸಾಮಾಜಿಕ ಅರಣ್ಯ ಇಲಾಖೆಯಿಂದ ತಾಲೂಕಿನಾದ್ಯಂತ 2019-20 ನೇ ಸಾಲಿನಲ್ಲಿ 9000ಕ್ಕೂ ಹೆಚ್ಚು ಗುಂಡಿಗಳನ್ನು ತೋಡಲಾಗಿದೆ. ಇದರಲ್ಲಿ ಈಗಾಗಲೇ ಕೆಲ ಭಾಗಗಳಲ್ಲಿ ಸಸಿಗಳನ್ನು ನೆಡಲಾಗಿದ್ದು, ಇದರಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.

    | ಲೋಕನಗೌಡ ಗೌಡರ ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts