More

    ಸಭೆಯಲ್ಲಿ ಕಥೆ, ಕಾದಂಬರಿ ಓದಬೇಡಿ ; ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷ, ಸಿಇಒ ತರಾಟೆ

    ಬೆಂಗಳೂರು ಗ್ರಾಮಾಂತರ : ‘ಜಿಲ್ಲಾಪಂಚಾಯಿತಿ ಸಭೆಗೆ ಬಂದು ಕಥೆ ಕಾದಂಬರಿ ಓದಬೇಡಿ. ನಿರ್ದೇಶನ ನೀಡಿದ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು, ಈ ಬಗ್ಗೆ ಸಮಗ್ರ ವರದಿಯನ್ನು ಅಂಕಿ ಅಂಶ ಸಮೇತ ನೀಡಬೇಕು. ಕಾಟಾಚಾರಕ್ಕೆ ಅಸ್ಪಷ್ಟ ಉತ್ತರ ನೀಡಬೇಡಿ…’- ಹೀಗೆ ಅಧಿಕಾರಿಗಳ ವಿರುದ್ಧ ಗರಂ ಆದ ಜಿಪಂ ಸಿಇಒ ಎಂ.ಆರ್. ರವಿಕುಮಾರ್, ಅಧಿಕಾರಿಗಳ ಬೆವರಿಳಿಸಿದರು.

    ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರಿಗಳ ಅಸ್ಪಷ್ಟ ಉತ್ತರಕ್ಕೆ ಅಸಮಾಧಾನಗೊಂಡ ಸಿಇಒ, ವಸ್ತು ಸ್ಥಿತಿಯ ಬಗ್ಗೆ ಸಮರ್ಪಕವಾಗಿ ಉತ್ತರ ನೀಡಿ ಎಂದು ಕುಡಿಯುವ ನೀರು ವಿಭಾಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

    ಜಿಪಂ ಸಭೆಗೆ ತನ್ನದೇ ಆದ ಗಾಂಭೀರ್ಯವಿದೆ. ಇಲ್ಲಿ ಚರ್ಚೆಯಾಗುವ ವಿಷಯಕ್ಕೆ ಭಾರಿ ತೂಕವಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು. ಸಮಯಕ್ಕೆ ಸರಿಯಾಗಿ ಬಿಲ್ ನೀಡದ ಅಧಿಕಾರಿಗಳ ವೇತನ ಕಡಿತಗೊಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಜಿಪಂ ಅಧ್ಯಕ್ಷ ವಿ. ಪ್ರಸಾದ್ ಹೇಳಿದರು. ‘ಜಿಪಂ ಸಭೆಗೆ ಗೌರವವಿಲ್ಲವೆಂದರೆ ಹೇಗೆ, ಎಲ್ಲವೂ ನಿಮ್ಮ ಇಲಾಖೆಯ ಆಯುಕ್ತರ ಅಣತಿಯಂತೆಯೇ ನಡೆಯುವುದಾದರೆ ನೀವು ಅಲ್ಲಿಗೇ ಹೋಗಿ, ನಿಮ್ಮ ಸೇವೆ ತೃಪ್ತಿಕರವಾಗಿಲ್ಲ. ನೀವು ನಿಮ್ಮ ಮಾತೃ ಇಲಾಖೆಗೆ ಮರಳಿ’ ಎಂದು ಅಧ್ಯಕ್ಷರು ಜಿಲ್ಲಾ ಕುಡಿಯುವ ನೀರು ವಿಭಾಗದ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

    ಬೇಸಿಗೆ ಆರಂಭವಾಗಿದ್ದು, ನೀರಿನ ಸಮಸ್ಯೆ ಶುರುವಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಸಕಾಲಕ್ಕೆ ಬಿಲ್ ಬಿಡುಗಡೆ ಮಾಡಬೇಕು. ಆದರೆ ತಿಂಗಳಾನುಗಟ್ಟಲೆ ಬಿಲ್ ಬಾಕಿ ಉಳಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ತಿಂಗಳೇ ಕಳೆದರೂ ಬಿಲ್ ಪಾವತಿ ಮಾಡುವುದಿಲ್ಲ. ಕೆಲಸ ಮಾಡುವವರಿಗೆ ಗಡುವು ನೀಡುತ್ತಾರೆ. ನಿಗದಿತ ಗಡುವಿನೊಳಗೆ ಕೆಲಸ ಮಾಡಿದರೂ ಅವರಿಗೆ ಬಿಲ್ ಮಾಡುವುದಿಲ್ಲ. ಕೆಲಸ ಮಾಡದ ಅಧಿಕಾರಿಗಳನ್ನು ಜಿಪಂನಿಂದ ಬಿಡುಗಡೆಗೊಳಿಸಿ ಎಂದರು.

    ಬಿಲ್ ಮಾಡದಿದ್ರೆ ವೇತನ ಕಟ್!: ಅಭಿವೃದ್ಧಿ ಕಾಮಗಾರಿ ವಿಷಯಗಳಲ್ಲಿ ಹಣ ಪಾವತಿಗೆ ಸಂಬಂಧಪಟ್ಟಂತೆ ನಿಗದಿತ ವೇಳೆಗೆ ಪ್ರಕ್ರಿಯೆ ಮುಗಿಸಿ ಬಿಲ್ ಮಾಡಲು ನಿರ್ಲಕ್ಷ್ಯ ಧೋರಣೆ ಅನುಸರಿಸುವ ಅಧಿಕಾರಿಗಳ ವೇತನ ಕಡಿತಗೊಳಿಸಲಾಗುವುದು ಎಂದು ಸಿಇಒ ಎಚ್ಚರಿಕೆ ನೀಡಿದರು.

    ಸರ್ಕಾರಕ್ಕೆ ವಂದನೆ ಸಲ್ಲಿಸಲೇಬೇಕು : ಕರೊನಾದಂಥ ವಿಷಮ ಪರಿಸ್ಥಿತಿಯಲ್ಲೂ ಯಾವ ಅಧಿಕಾರಿಯ ಸಂಬಳವನ್ನೂ ತಡೆಹಿಡಿದಿಲ್ಲ ಅಥವಾ ಕಡಿತ ಮಾಡಿಲ್ಲ. ಈ ವಿಷಯದಲ್ಲಿ ಸರ್ಕಾರಕ್ಕೆ ವಂದನೆ ಸಲ್ಲಿಸಲೇಬೇಕು. ಶಾಸಕರು, ಸಂಸದರ ವೇತನ ಕಡಿತಗೊಂಡಿದೆ, ಖಾಸಗಿ ಉದ್ಯೋಗಿಗಳ ವೇತನವೂ ಕಡಿತಗೊಂಡಿದೆ. ಆದರೆ ಸರ್ಕಾರಿ ನೌಕರರ ಅಕೌಂಟಿಗೆ ತಿಂಗಳಿಗೆ ಸರಿಯಾಗಿ ಹಣ ಜಮಾ ಆಗಿದೆ. ಆದರೆ ಸರ್ಕಾರಿ ಅಧಿಕಾರಿಗಳು ಕರ್ತವ್ಯಲೋಪ ಎಸಗುವುದು ಎಷ್ಟು ಸರಿ ಎಂದು ಸಿಇಒ ಕಿಡಿಕಾರಿದರು.

    ಹಣದ ಕೊರತೆ ನಡುವೆಯೂ ನಿಭಾಯಿಸಬೇಕು: ಜಿಲ್ಲೆಯಲ್ಲಿ ಯಾವುದೇ ಜಲಮೂಲವಿಲ್ಲ, ಶುದ್ಧ ನೀರಿನ ಘಟಕಗಳೇ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಇವುಗಳ ಸಮರ್ಪಕ ನಿರ್ವಹಣೆ ಪ್ರತಿ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸಿಇಒ ಹೇಳಿದರು. ಬೇಸಿಗೆ ಹಿನ್ನೆಲೆಯಲ್ಲಿ ಕುಡಿವ ನೀರಿನ ನಿರ್ವಹಣೆಗೆ ಸರ್ಕಾರ 3 ಕೋಟಿ ರೂ. ಅನುದಾನ ನೀಡಿದೆ. ಪ್ರತಿ ತಾಲೂಕಿಗೆ 50 ಲಕ್ಷ ರೂ. ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ಸೂಚಿಸಿದರು.

    ಅಧಿಕಾರಿಗಳಿಗೆ ಡ್ರಿಲ್ :ಸಭೆಯಲ್ಲಿ ಜಿಪಂ ಅಧ್ಯಕ್ಷ ವಿ.ಪ್ರಸಾದ್ ಅಧಿಕಾರಿಗಳಿಗೆ ಡ್ರಿಲ್ ಮಾಡಿಸಿದರು. ಕಳೆದ ಸಭೆಯಲ್ಲಿ ಸೂಚಿಸಲಾದ ಕಾರ್ಯಗಳನ್ನು ಮುಗಿಸದ, ನಿಗದಿತ ಕಾಲಾವಧಿ ಮೀರಿದರೂ ಕಾರ್ಯಪ್ರವೃತ್ತರಾಗದ, ಸಭೆಯಲ್ಲಿ ಸ್ಪಷ್ಟ ಉತ್ತರ ನೀಡದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

    ಖಾತಾ ಕ್ಯಾತೆ: ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಆಸ್ತಿ ಖಾತೆಗೆ ಸಂಬಂಧಪಟ್ಟ ಚರ್ಚೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲೂಕು ಇಒಗಳನ್ನು ತರಾಟೆ ತೆಗೆದುಕೊಂಡ ಅಧ್ಯಕ್ಷರು, ಸರ್ಕಾರಿ ಶಾಲೆಗಳ ಆಸ್ತಿ ಭದ್ರತೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ಸೂಚಿಸಿದರು. ಈ ಹಿಂದೆ ದಾನಿಗಳಿಂದ ಬಂದ ಶಾಲಾ ಆವರಣಗಳು ಈಗ ಪರರ ಪಾಲಾಗುವ ಪರಿಸ್ಥಿತಿ ಬಂದಿದೆ. ಅಧಿಕಾರಿಗಳು ಆಯಾ ಪಂಚಾಯಿತಿ ಪಿಡಿಒಗಳ ಸಹಕಾರದೊಂದಿಗೆ ಬಾಕಿ ಇರುವ ಎಲ್ಲ ಸರ್ಕಾರಿ ಶಾಲೆ ಆಸ್ತಿಗಳ ಖಾತೆ ಸಿದ್ಧಪಡಿಸಬೇಕು ಎಂದು ತಾಕೀತು ಮಾಡಿದರು.

    ಮೈಕ್‌ನಲ್ಲಿ ಮಾತಾಡ್ರಿ: ಜಿಪಂ ಸಭೆಯಲ್ಲಿ ಆಸೀನರಾದ ಅಧಿಕಾರಿಗಳು ಸಭೆಯಲ್ಲಿ ಚರ್ಚೆಯಾಗುವ ಯಾವುದೇ ವಿಷಯದಲ್ಲೂ ಮೈಕ್ ಬಳಸದೆ ಮಾತನಾಡಲು ಯತ್ನಿಸುತ್ತಿದ್ದರು. ಇದರಿಂದ ಸಿಡಿಮಿಡಿಗೊಂಡ ಸಿಇಒ ಮೈಕ್ ಇರೋದ್ಯಾಕ್ರಿ, ಮೈಕ್‌ನಲ್ಲಿ ಮಾತನಾಡಿ ಎಂದು ಗದರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts