More

    ಸದಾಶಿವ ವರದಿ ಜಾರಿಗೆ ವಿರೋಧ  – ವಿವಿಧ ಸಮಾಜಗಳ ಪ್ರತಿಭಟನೆ – ಬೆಳಗಾವಿಯಲ್ಲೂ ಹೋರಾಟದ ಎಚ್ಚರಿಕೆ 

    ದಾವಣಗೆರೆ : ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ವಿರೋಧಿಸಿ ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಇತರೆ ಸಮುದಾಯದವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
    ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್‌ಗಳಲ್ಲಿ ತೆರಳಿದ ಸಮಾಜದವರು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು.
    ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಗೆ ಮರುಜೀವ ನೀಡಿ, ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬುದಾಗಿ ಸಂಪುಟ ದರ್ಜೆ ಸಚಿವರಾದ ಮುನಿಯಪ್ಪ, ಡಾ.ಜಿ.ಪರಮೇಶ್ವರ ಅವರು ಬಹಿರಂಗ ಸಭೆಗಳಲ್ಲಿ ಹೇಳಿರುವುದು ಬಹುತೇಕ ಸಮುದಾಯಗಳಲ್ಲಿ ಆತಂಕ ಹುಟ್ಟಿಸಿದೆ. ಯಾವುದೇ ಕಾರಣಕ್ಕೂ ಈ ವರದಿ ಮರುಜಾರಿಗೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಪ್ರತಿಭಟನೆ ವೇಳೆ ಮಾತನಾಡಿ ಬಂಜಾರ ಸಮಾಜದ ಮುಖಂಡ ಜಿ.ಚಂದ್ರಾನಾಯ್ಕ ಹಾಲೇಕಲ್ಲು, ಈಗಾಗಲೇ ಸತ್ತು ಹೋಗಿರುವ ಸದಾಶಿವ ಆಯೋಗದ ವರದಿಗೆ ಕಾಂಗ್ರೆಸ್ ಸರ್ಕಾರ ಜೀವ ಕೊಡಲು ಹೊರಟಿರುವುದು ಸರಿಯಲ್ಲ. ಇದನ್ನು ಮತ್ತೆ ಪ್ರಸ್ತಾಪಿಸುತ್ತಿರುವುದರಿಂದ 99 ಸಮುದಾಯಗಳಲ್ಲಿ ಆತಂಕ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಹಿಂದಿನ ಬಿಜೆಪಿ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ತಿರಸ್ಕರಿಸಿ, ಒಳ ಮೀಸಲು ರಚಿಸಿತ್ತು. ಚುನಾವಣೆಯಲ್ಲಿ 99 ಸಮುದಾಯಗಳು ಬಿಜೆಪಿ ವಿರೋಧಿ ಮತ ಚಲಾಯಿಸಿದವು. ಈಗಿನ ಸರ್ಕಾರದ ನಡೆ ಕೂಡ ಎಲ್ಲ ಸಮುದಾಯಗಳನ್ನು ಹೋರಾಟದ ಹಾದಿಗೆ ಎಡೆಮಾಡಿಕೊಡುತ್ತಿದೆ. ಕೆಲ ಸಚಿವರ ಹೇಳಿಕೆಗಳು ಜಾತಿ ಸಂಘರ್ಷಕ್ಕೆ ಎಡೆ ಮಾಡುವ ಸಂಶಯವಿದೆ ಎಂದರು.
    ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸದಾಶಿವ ವರದಿ ಜಾರಿಯನ್ನು ಮತಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಇದನ್ನು ವಿರೋಧಿಸಿ ಸಹೋದರ ಸಮಾಜಗಳು ಇಂದು ಬೀದಿಗಿಳಿದಿವೆ. ಸರ್ಕಾರ ಇದನ್ನು ಮುಂದುವರಿಸಿದಲ್ಲಿ ಬಿಜೆಪಿ ಸರ್ಕಾರಕ್ಕೆ ಕಲಿಸಿದ ಪಾಠವನ್ನೇ ಕಾಂಗ್ರೆಸ್ ಸರ್ಕಾರಕ್ಕೂ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬೆಳಗಾವಿಯ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಅಲ್ಲಿಯೂ ಪ್ರತಿಭಟನೆ ನಡೆಸುವ ಚಿಂತನೆ ಇದೆ ಎಂದೂ ಹೇಳಿದರು.
    ಭೋವಿ ಸಮಾಜದ ಮುಖಂಡ ಎಚ್. ಜಯಣ್ಣ ಮಾತನಾಡಿ ರಾಜ್ಯ ಬರಗಾಲಕ್ಕೆ ತುತ್ತಾಗಿದ್ದು ಅನೇಕ ಸಮುದಾಯಗಳು ಕೂಲಿ ಅರಸಿ ಗುಳೆ ಹೋಗುವಂತಹ ಸಂದರ್ಭ ಸೃಷ್ಟಿಯಾಗಿದೆ. ಈ ವೇಳೆ 99 ಸಮುದಾಯಗಳನ್ನು ಬೀದಿಗೆ ತರಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪ್ರತಿಭಟನೆಯಲ್ಲಿ ವಿವಿಧ ಸಮಾಜದ ಮುಖಂಡರಾದ ಜಿ.ಮಂಜಾನಾಯ್ಕ, ಹಾಲೇಶನಾಯ್ಕ, ವಿಠ್ಠಲ್, ಡಾಬಾ ನಾಗರಾಜ್, ವೆಂಕಟೇಶ್, ಮುರುಗೇಶನಾಯ್ಕ, ಜಿ.ಸಿ.ಮಂಜಪ್ಪ, ಪರಶುರಾಮ್, ಅನಿಲ್‌ಕುಮಾರ್, ಹನುಮೇಶಿ, ಹನುಮಂತನಾಯ್ಕ, ಚಿದಾನಂದ್, ನಾಗರಾಜನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts