More

    ಸದಾಶಿವ ವರದಿ ಅಂಗೀಕಾರಕ್ಕೆ ಆಗ್ರಹ- ದಸಂಸ ಧರಣಿ 

    ದಾವಣಗೆರೆ: ರಾಜ್ಯ ಸರ್ಕಾರ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ ಬಣ) ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
    ಸಚಿವ ಮಾಧುಸ್ವಾಮಿ ಕಲ್ಪಿತ ಶವದೊಂದಿಗೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿ, ಅಲ್ಲಿ ಸಂಜೆಯವರೆಗೆ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
    ದಲಿತರ ಚೇತನ ಪ್ರೊ. ಬಿ.ಕೃಷ್ಣಪ್ಪ ಅವರಿಗೆ ಮರಣೋತ್ತರ ಕರ್ನಾಟಕರತ್ನ ಪ್ರಶಸ್ತಿ ನೀಡಬೇಕು. ಎಸ್ಸಿ ಎಸ್ಟಿ ಭೂ ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು. ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಮೀಸಲು ಅನುದಾನ ಹಿಂಪಡೆಯಲು ಸರ್ಕಾರ ರಚಿಸಿಕೊಂಡ ಕಾಯ್ದೆ ಹಿಂಪಡೆಯಬೇಕು. ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡಬೇಕು. ಬೇಡಜಂಗಮ ಹಾಗೂ ಬುಡ್ಗ ಜಂಗಮ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವವರನ್ನು ಹಾಗೂ ನೀಡುವ ಅಧಿಕಾರಿಗಳನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದರು.
    ಬಿ.ಚಿತ್ತಾನಹಳ್ಳಿ ಹಾಗೂ ಕಲ್ಪನಹಳ್ಳಿಯಲ್ಲಿ ವಾಸವಿರುವ ನಿವೇಶನ ರಹಿತರಿಗೆ, ಕೊಗ್ಗನೂರು ಹಾಗೂ ಯರಗುಂಟೆ ಕರಿಯಮ್ಮ ದೇವಸ್ಥಾನ ಬಳಿ ಹಾಗೂ ಚನ್ನಗಿರಿ ತಾಲೂಕಿನ ಹಿರೇಗಂಗೂರು ಬಳಿ ವಾಸವಿರುವ ಗುಡಿಸಲುವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು. ತುರ್ಚಘಟ್ಟ ಗ್ರಾಮದಲ್ಲಿ ಮೀಸಲಿಟ್ಟ 6 ಗುಂಟೆ ಜಾಗದಲ್ಲಿ ಅಂಬೇಡ್ಕರ್ ಭವನ ಹಾಗೂ ಅಂಗನವಾಡಿ ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಚಿಂತಕ ಪ್ರೊ. ಎ.ಬಿ.ರಾಮಚಂದ್ರಪ್ಪ, ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಬುಳಸಾಗರ ಸಿದ್ದರಾಮಣ್ಣ, ಪಿ.ಜೆ. ಮಹಾಂತೇಶ್, ವೀರೇಶ್, ಸಣ್ಣ ಅಜ್ಜಯ್ಯ, ವಿಜಯಲಕ್ಷ್ಮೀ, ಎಂ.ಲಿಂಗರಾಜು, ಅಣಜಿ ಹನುಮಂತಪ್ಪ, ಕೆಟಿಜೆ ನಗರ ಪ್ರದೀಪ್, ಹಾಲುವರ್ತಿ ಮಹಾಂತೇಶ್, ಚಿತ್ರಲಿಂಗಪ್ಪ, ಪರಮೇಶ್ವರಪ್ಪ ಬೆನಕನಹಳ್ಳಿ, ಬಿ.ಚಂದ್ರಪ್ಪ, ಹನುಮಂತ ಬೇತೂರು, ಗುಮ್ಮನೂರು ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts