More

    ಸತ್ಯಾಗ್ರಹ ಸ್ಮಾರಕ ಭವನಕ್ಕೆ ವಿರೋಧವಿಲ್ಲ

    ಸಿದ್ದಾಪುರ: ಪಟ್ಟಣದಲ್ಲಿ ಸತ್ಯಾಗ್ರಹ ಸ್ಮಾರಕ ಭವನ ಕಟ್ಟಲು ನಮ್ಮ ವಿರೋಧವಲ್ಲ. ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಹೇಳಿದರು.

    ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ಹಿಂದೆ ಪಪಂ ಕಬ್ಜಾದಲ್ಲಿದ್ದ ಸಮಾಜ ಮಂದಿರ ಸ್ಥಳದಲ್ಲಿ ಭವನದ ಶಂಕುಸ್ಥಾಪನೆ ನಡೆದಿತ್ತು. ಆಗ ಈ ಕಾಮಗಾರಿಗೆ ಅನುದಾನ ಬಾರದೇ ಶಂಕುಸ್ಥಾಪನೆ ಮಾಡುತ್ತಿರುವ ಕುರಿತು ಪ್ರಶ್ನೆ ಮಾಡಿದ್ದೇನೆ. ಅಲ್ಲದೆ, ಶಿರಸಿ ಮತ್ತು ಚಂದ್ರಗುತ್ತಿ ಮಾರ್ಗ ಹೆದ್ದಾರಿಯಾಗಿದ್ದು, ಕಾಯ್ದೆ ಪ್ರಕಾರ ಜಾಗ ಬಿಟ್ಟರೆ ಸ್ಥಳವೇ ಉಳಿಯುವುದಿಲ್ಲ. ಈಗ ಸಮಾಜ ಮಂದಿರ, ಅಲ್ಲಿನ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಗಳೆಲ್ಲ ಪಪಂನಿಂದ ಆಗಿವೆ. ಅಲ್ಲಿ ಸಾರ್ವಜನಿಕ ಸಭೆ, ಸಮಾರಂಭ, ಅನ್ಯ ಧರ್ವಿುಯರ ವಿವಾಹ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಈಗಿನ ಸಂದರ್ಭಕ್ಕೆ ಅನುಗುಣವಾಗಿ ಸಮಾಜ ಮಂದಿರ ಮಾಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ವ್ಯವಸ್ಥಿತವಾದ ಸ್ವಾತಂತ್ರ್ಯ ಭವನ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದರು.

    ನಮಗೂ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಬಗ್ಗೆ ಹೆಮ್ಮೆಯಿದೆ. ವ್ಯವಸ್ಥಿತವಾದ ಭವನ ನಿರ್ವಣಕ್ಕೆ ಅಗತ್ಯವಾದ ಸ್ಥಳ ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದ ಎಸಿಎಫ್ ಕ್ವಾರ್ಟರ್ಸ್ ಬಳಿಯಿದೆ. 2 ಕೋಟಿ ರೂ. ಅನುದಾನ ಆದೇಶದಲ್ಲಿ ಇಂಥ ಜಾಗದಲ್ಲೇ ಭವನ ಆಗಬೇಕು ಎಂದು ಉಲ್ಲೇಖವಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಲಿ. ಭವನ ನಿರ್ವಣಕ್ಕೆ ಈಗ ಹಣ ಬಿಡುಗಡೆ ಮಾಡಿಸಿದವರು 4 ವರ್ಷದ ಹಿಂದೆಯೇ ಹಣ ತರಬಹುದಿತ್ತು. ಈಗ ಈ ಪ್ರಕ್ರಿಯೆಗೆ ಮುಂದಾಗಿರುವುದನ್ನು ನೋಡಿದರೆ ನಮ್ಮ ಮೇಲೆ ಗೂಬೆ ಕೂರಿಸಿ, ವಿಲನ್ ಮಾಡಲು ಹೊರಟಂತೆ ಕಂಡುಬರುತ್ತಿದೆ ಎಂದರು.

    ಪಪಂ ಸದಸ್ಯರಾದ ಮಾರುತಿ ನಾಯ್ಕ ಹೊಸೂರು, ನಂದನ ಬೋರ್ಕರ್, ಸುಧೀರ ಕೊಂಡ್ಲಿ, ವಿನಯ ಹೊನ್ನೆಗುಂಡಿ, ರವಿ ನಾಯ್ಕ ಜಾತಿಕಟ್ಟೆ, ವಿಜಯೇಂದ್ರ ಗೌಡರ್, ವೆಂಕೋಬ ಎನ್.ಜಿ., ಯಶೋಧಾ ಮಡಿವಾಳ, ಮುಬಿನಾ ಎಂ. ಗುರಕಾರ, ಮಂಜುಳಾ ನಾಯ್ಕ, ಕವಿತಾ ಹೆಗಡೆ, ಚಂದ್ರಕಲಾ ನಾಯ್ಕ ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts