More

    ಸತ್ಯದರ್ಶನ ಸಭೆ ನಿಶ್ಚಿತ, ಫಲಶ್ರುತಿ ಕುತೂಹಲ

    ಹುಬ್ಬಳ್ಳಿ: ವೀರಶೈವ ಸಮುದಾಯದ ಪ್ರತಿಷ್ಠಿತ ಮೂರುಸಾವಿರ ಮಠ ಈಗ ಉತ್ತರಾಧಿಕಾರಿ ವಿವಾದದ ಹಿನ್ನೆಲೆಯಲ್ಲಿ ಫೆ. 23ರಂದು ಸತ್ಯದರ್ಶನ ಸಭೆಗೆ ವೇದಿಕೆಯಾಗಿದೆ.

    ಕೋಟ್ಯಂತರ ಭಕ್ತರ ಮತ್ತು ಸಮುದಾಯದ ಚಿತ್ತ ಈಗ ಮಠದ ವಿದ್ಯಮಾನದತ್ತ ಕೇಂದ್ರೀಕೃತವಾಗಿದೆ. ಉತ್ತರಾಧಿಕಾರ ಮುಚ್ಚಳಿಕೆ ಬರೆದುಕೊಟ್ಟ ಮೂರುಸಾವಿರ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ (ಮೂಜಗು) ಸ್ವಾಮೀಜಿ ಹಾಗೂ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿದ 52 ಗಣ್ಯರನ್ನು ದಿಂಗಾಲೇಶ್ವರ ಸ್ವಾಮೀಜಿ ಸತ್ಯದರ್ಶನ ಸಭೆಗೆ ಆಹ್ವಾನಿಸಿದ್ದಾರೆ. ಗುರುಸಿದ್ಧೇಶ್ವರರ ಕರ್ತೃ ಗದ್ದುಗೆ ಮೇಲೆ ಪ್ರಮಾಣ ಮಾಡಿ ಎಲ್ಲ ವಿದ್ಯಮಾನಗಳ ಬಹಿರಂಗ ಚರ್ಚೆ ನಡೆದು ಇತ್ಯರ್ಥವಾಗಲಿ ಎಂದು ಸವಾಲು ಹಾಕಿದ್ದರಿಂದ ಕುತೂಹಲ ಇಮ್ಮಡಿಸಿದೆ.

    ಸದ್ಯದ ವಿದ್ಯಮಾನಗಳ ಪ್ರಕಾರ ದಿಂಗಾಲೇಶ್ವರರ ಸವಾಲು ಸ್ವೀಕರಿಸಲು ಮೂಜಗು ಹಾಗೂ ಉನ್ನತಾಧಿಕಾರ ಸಮಿತಿ ಸದಸ್ಯರು ಹಿಂದೇಟು ಹಾಕಿದಂತಿದ್ದು, ನ್ಯಾಯಾಲಯದಲ್ಲಿಯೇ ತೀರ್ವನವಾಗಲಿ ಎಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

    ಇದು ನನ್ನ ಮರ್ಯಾದೆ ಪ್ರಶ್ನೆ. ಉತ್ತರಾಧಿಕಾರಿಯಾಗಲು ನಾನು ಆಸೆ ಪಟ್ಟಿರಲಿಲ್ಲ. 2014ರಲ್ಲಿ ನನಗೆ ಗಂಟುಬಿದ್ದು ಉತ್ತರಾಧಿಕಾರಿಯಾಗಲು ಒಪ್ಪಿಸಿದವರು ಮೂಜಗು ಹಾಗೂ ಗಣ್ಯ ಭಕ್ತರು. ನೇಮಣೂಕಿ ಪತ್ರ ಸಿದ್ಧಪಡಿಸಿ ಅದಕ್ಕೆ ಮೂಜಗು, ಕೆಲವು ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು, ಗಣ್ಯರು ಸೇರಿ 52 ಜನ ಸಹಿ ಹಾಕಿದ್ದಾರೆ. ಕೆಲವರು ಆಗ ವಿವಾದ ಎಬ್ಬಿಸಿದರು. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದರು. ಈ ಎಲ್ಲವನ್ನೂ ಇತ್ಯರ್ಥಪಡಿಸಿ ಎಂದು 6 ವರ್ಷದಿಂದ ಮೂಜಗು ಹಾಗೂ ಗಣ್ಯರನ್ನು ಕೇಳಿಕೊಳ್ಳುತ್ತ ಬಂದಿದ್ದೇನೆ. ಆದರೆ, ಜಗದ್ಗುರುಗಳನ್ನು ಕೆಲವರು ಕಟ್ಟಿಹಾಕುತ್ತಿದ್ದಾರೆ. ಹೀಗಾಗಿ, ಸತ್ಯ ಏನೆಂದು ಸಾರಿ ಹೇಳಲು ಸಭೆ ನಿಗದಿಪಡಿಸಿದ್ದೇನೆ. ಮೂಜಗು ಸೇರಿ ಸಹಿ ಮಾಡಿದ 52 ಗಣ್ಯರು, ಭಕ್ತರು ಎಲ್ಲರೂ ಬನ್ನಿ. ವಿರೋಧ ಮಾಡುವವರು, ಆರೋಪ ಮಾಡಿದವರೂ ಬಹಿರಂಗ ಚರ್ಚೆಗೆ ಬನ್ನಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ.

    ಸಭೆಗೆ ಯಾವುದೇ ಅಡೆತಡೆ ಇಲ್ಲ ಎಂದು ಗೃಹ ಸಚಿವ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ಆದರೆ, ಸಭೆಗೆ ಮೂಜಗು, ಇತರರು ಹಾಜರಾಗುವ ಸಾಧ್ಯತೆ ಕಂಡುಬಂದಿಲ್ಲ. ಸತ್ಯದರ್ಶನ ಸಭೆಯೂ ಬಹಿರಂಗವಾಗಿ ನಡೆಯಲು ಮಠದ ಪರವಾನಗಿ ಪಡೆದಿಲ್ಲ ಎಂದು ಪೊಲೀಸರು ತಡೆ ಒಡ್ಡುವ ಸಾಧ್ಯತೆ ಹೆಚ್ಚಿದೆ. ಒಂದುವೇಳೆ ಸತ್ಯದರ್ಶನ ಸಭೆಗೆ ಅಡ್ಡಿ ಆತಂಕ ಒಡ್ಡಿದರೆ, ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರು ತೀವ್ರ ಅಸಮಾಧಾನಗೊಳ್ಳುವ ಮತ್ತು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ.

    ಉನ್ನತಾಧಿಕಾರ ಸಮಿತಿಯ ಶಂಕರಣ್ಣ ಮುನವಳ್ಳಿ, ಪಾಲಿಕೆ ಮಾಜಿ ಸದಸ್ಯರಾದ ಶಿವು ಮೆಣಸಿನಕಾಯಿ, ಅಜ್ಜಪ್ಪ ಬೆಂಡಿಗೇರಿ, ಹಿರಿಯರಾದ ಅಂದಾನಪ್ಪ ಸಜ್ಜನರ ಮೊದಲಾದವರು ಮೂಜಗು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

    ಚಿತ್ರದುರ್ಗ ಶರಣರ ಭೇಟಿ

    ಇಲ್ಲಿನ ಮೂರು ಸಾವಿರ ಮಠಕ್ಕೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಶರಣರು ಶನಿವಾರ ಭೇಟಿ ನೀಡಿದರು. ಮೂಜಗು ಅವರು ಮಾಲೆ ಹಾಕಿ ಶರಣರನ್ನು ಸ್ವಾಗತಿಸಿದರು. ದಾರಿಯುದ್ದಕ್ಕೂ ಧೈರ್ಯಗೆಡದಿರಿ ಗುರುಸಿದ್ಧರು ನಿಮ್ಮ ಜತೆ ಇದ್ದಾರೆ ಎಂದರು. ಮೂಜಗು ಅವರು ನಗುಮೊಗದಲ್ಲಿಯೇ ‘ಆಯ್ತು ಆಯ್ತು’ ಎಂದಷ್ಟೇ ಹೇಳಿದರು. ನಂತರ ಖಾಸಗಿ ಕೊಠಡಿಗೆ ತೆರಳಿದ ಉಭಯ ಶ್ರೀಗಳು, ಸದ್ಯ ನಡೆದಿರುವ ವಿದ್ಯಮಾನಗಳ ಕುರಿತು ರ್ಚಚಿಸಿದರು. ಧೈರ್ಯ ತುಂಬಲು ಬಂದೀನಿ: ಮೂಜಗು ಅವರು ಒತ್ತಡಕ್ಕೆ ಒಳಗಾಗಬಾರದು ಎಂಬ ದೃಷ್ಟಿಯಿಂದ ಅವರಿಗೆ ಧೈರ್ಯ ಮತ್ತು ಸಮಾಧಾನ ಹೇಳಲು ಬಂದಿದ್ದೇನೆ ಎಂದು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಶರಣರು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರತಿಷ್ಠಿತ ಹಾಗೂ ಪ್ರಾಚೀನ ಮಠ. ಹಿಂದಿನ ಹಾಗೂ ಈಗಿನ ಶ್ರೀಗಳು ಧಾರ್ವಿುಕ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಮಗೆ ಇದರಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿ ಇಲ್ಲ. ಯಾವುದೇ ಮಠವಾದರೂ ಬೀದಿ ರಂಪ ಆಗಬಾರದು ಎನ್ನುವ ವಿಚಾರ ನಮ್ಮದು. ಪರಸ್ಪರ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಂಥ ವಿದ್ಯಮಾನಗಳು ಶೋಭೆಯಲ್ಲ. ಯಥಾವತ್ತಾಗಿ ಹಾಗೂ ಕಾರ್ಯವೈಖರಿಯಿಂದ ಶ್ರೀಮಠ ನಿಭಾಯಿಸಲು ಈಗಿನ ಶ್ರೀಗಳು ಸಮರ್ಥರಾಗಿದ್ದಾರೆ. ಸದ್ಯದ ಪರಿಸ್ಥಿತಿ ತಹಬದಿಗೆ ಬರಲಿ. ಮುಂದೆ ನಾವು, ಮೂಜಗು ಸೇರಿ ಬಸವ ತತ್ತ್ವ ಪಸರಿಸಲು ಪ್ರಯತ್ನಿಸುತ್ತೇವೆ ಎಂದರು.

    ಸಭೆ ನಡೆದೇ ನಡೆಯುತ್ತದೆ

    ಫೆ. 23ರಂದು ಕರೆದಿರುವ ಸತ್ಯದರ್ಶನ ಸಭೆ ನಡೆದೇ ನಡೆಯುತ್ತದೆ. ಯಾರು ಏನೇ ಮಾಡಿದರೂ ಸಭೆ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, 10-15 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಎಂದು ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ ಬಸವೇಶ್ವರರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರರ್ ಪ್ರತಿಮೆಗೆಲ್ಲ ಮಾಲಾರ್ಪಣೆ ಮಾಡಿ, 10.30ಕ್ಕೆ ನೆಹರು ಮೈದಾನದಿಂದ ಭಕ್ತರೊಂದಿಗೆ ಶಾಂತಿಯುತ ಮೆರವಣಿಗೆಯಲ್ಲಿ ಮಠಕ್ಕೆ ತೆರಳುತ್ತೇನೆ. ಮಠದ ಕರ್ತೃ ಗದ್ದುಗೆ ದರ್ಶನ ಪಡೆಯಲು ಅಡ್ಡಿಪಡಿಸುವ ಹಕ್ಕು ಯಾರಿಗೂ ಇಲ್ಲ. ಅದಕ್ಕೆ ತಡೆ ಮಾಡಿದರೆ ಪರಮಾಪರಾಧ ವಾಗುತ್ತದೆ. ನಾನಂತೂ ಅಲ್ಲೇ ಓದಿ ಬೆಳೆದವನು. ನನ್ನ ಗುರುಗಳು ಅಲ್ಲಿದ್ದಾರೆ. ಮಠ ಪ್ರವೇಶಿಸಲು ಬಿಡದೇ ಇದ್ದರೆ ಸಮಾಜವನ್ನು ರೊಚ್ಚಿಗೆಬ್ಬಿಸಿದಂತಾಗುತ್ತದೆ ಎಂದು ಎಚ್ಚರಿಸಿದರು. ನಾವು ಸತ್ಯವನ್ನು ಸಾಬೀತುಪಡಿಸಲು ಹೋಗುವುದು. ಆದ್ದರಿಂದ ಅತ್ಯಂತ ಶಿಸ್ತು, ಶಾಂತಿಯಿಂದ ನಡೆದುಕೊಳ್ಳುವಂತೆ ಭಕ್ತರಿಗೆ ತಿಳಿಸಲಾಗಿದೆ. ಬಂದವರಿಗೆ ನೀರು, ಆಹಾರದ ವ್ಯವಸ್ಥೆಯೂ ಇರುತ್ತದೆ. ಬೇರೆಯವರಿಂದ ತೊಂದರೆ ಆಗಬಹುದೆಂಬ ಕಾರಣಕ್ಕೆ ಪೊಲೀಸ್ ಭದ್ರತೆ ಕೇಳಿದ್ದೇವೆ ಎಂದರು.

    ಎಲ್ಲರೂ ಬರುತ್ತಾರೆಂಬ ವಿಶ್ವಾಸ ಇದೆ: ವಿವಾದವನ್ನು ಬಗೆಹರಿಸಬೇಕಾದವರು ಮೂಜಗು, ಭಕ್ತರು ಮತ್ತು ದಿಂಗಾಲೇಶ್ವರರು. ನಾನು ಹೋಗುತ್ತಿದ್ದೇನೆ. ಉಳಿದವರಿಗೆ ಆಹ್ವಾನಿಸಿದ್ದೇನೆ. ಅವರೆಲ್ಲ ಬರುತ್ತಾರೆಂಬ ವಿಶ್ವಾಸ ಇದೆ ಎಂದು ದಿಂಗಾಲೇಶ್ವರರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ನಾನು ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದರೆ ಕೆಲವರಿಗೆ ಸಮಸ್ಯೆಯಾಗುತ್ತದೆ. ಅಂಥವರು ವಿರೋಧ ಮಾಡುತ್ತಿದ್ದಾರೆ. ಅಂಥವರೇ ಮೂಜಗು ಅವರನ್ನು ಬಂಧನದಲ್ಲಿ ಇರುವಂತೆ ಮಾಡಿದ್ದಾರೆ. ಕೆಲವು ಕಾವಿಧಾರಿಗಳಿಗೂ ಸಭೆ ನಡೆಯದಂತೆ ಆಡಳಿತ ಯಂತ್ರದ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು. ಒಂದು ಮಠದಲ್ಲಿ ಇನ್ನೊಂದು ಮಠದ ಹಸ್ತಕ್ಷೇಪ ಸಲ್ಲ. ಆದರೂ ಮಾಡುತ್ತಾರೆ. ಆ ಕೆಲಸ ಮಾಡುವವರು ಕಾವಿ ಬಟ್ಟೆಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೂ ಖಾದಿ ಹಾಕಿಕೊಂಡು ರಾಜಕಾರಣ ಮಾಡುವವರಿಗೂ ವ್ಯತ್ಯಾಸ ಇಲ್ಲ ಎಂದು ವ್ಯಂಗ್ಯವಾಡಿದರು.

    ಸತ್ಯದರ್ಶನ ಸಭೆಗೆ ಮೂಜಗು ಅವರಿಗೆ ಮಾತ್ರ ಅಧಿಕೃತವಾದ ಲಿಖಿತ ಬಿನ್ನಹಪತ್ರ ಕಳುಹಿಸಿದ್ದೇನೆ. ನೇಮಣೂಕಿ ಪತ್ರಕ್ಕೆ ಸಹಿ ಹಾಕಿದ ಇತರ 51 ಗಣ್ಯರಿಗೆ ಮಾಧ್ಯಮದ ಮೂಲಕವೇ ಆಹ್ವಾನ ನೀಡಿದ್ದೇನೆ. ಗದ್ದುಗೆ ದರ್ಶನದ ನಂತರ ಮೊನ್ನೆ ದಿನ ಮಠದ ಹಜಾರದಲ್ಲಿ ಕುಳಿತಲ್ಲೇ ಕುಳಿತು ಸತ್ಯದರ್ಶನ ಸಭೆಯಲ್ಲಿ ಎಲ್ಲವನ್ನೂ ದಾಖಲೆ ಸಮೇತ ಹೇಳುತ್ತೇನೆ. ವಿರೋಧಿಸುವವರು, ಆರೋಪ ಮಾಡಿದವರೆಲ್ಲ ಬರಲಿ ಎಂದು ಪುನಃ ಸವಾಲು ಹಾಕಿದರು.

    ಬೇಡಿ ತಂದು ಕಟ್ಟುತ್ತೇನೆ: ಮೂರುಸಾವಿರ ಮಠಕ್ಕೆ ಮೊದಲಿನ ವೈಭವ ಬರಬೇಕು. ಸದ್ಯ ನಾವೆಲ್ಲ ನಿರೀಕ್ಷಿಸಿದಂತೆ ಇಲ್ಲ. ಮಠದ ಸಂಪತ್ತಿನ ಮೇಲೆ ನಾನು ಕಣ್ಣಿಟ್ಟಿಲ್ಲ. ಸಮಾಜ ಒಪ್ಪಿ, ಮಠದ ಉತ್ತರಾಧಿಕಾರ ವಿವಾದ ಭಾನುವಾರ ಇತ್ಯರ್ಥವಾದರೆ, ಭಕ್ತರಿಂದ ಬೇಡಿ ತಂದು ಶೈಕ್ಷಣಿಕ, ಸಾಮಾಜಿಕ, ಧಾರ್ವಿುಕ ಕೇಂದ್ರವಾಗಿಸುತ್ತೇನೆ. ಬರುವ ಜೂನ್ ತಿಂಗಳಲ್ಲೇ 500 ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಆರಂಭಿಸುತ್ತೇನೆ ಎಂದು ಘೊಷಿಸಿದರು. ಹಿಂದೆ ಲಿಂಗರಾಜ ಉಚಿತ ಪ್ರಸಾದ ನಿಲಯ ಇತ್ತು. ನಿತ್ಯ ಬೆಳಗ್ಗೆ ಪ್ರಾರ್ಥನೆ, ಸಂಜೆ ಪ್ರವಚನ ನಡೆಯುತ್ತಿತ್ತು. ಈಗ ಪ್ರಸಾದ ನಿಲಯ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

    ತಡರಾತ್ರಿವರೆಗೆ ನಡೆದ ಸಂಧಾನ ಯತ್ನ

    ಶ್ರೀ ದಿಂಗಾಲೇಶ್ವರ ಸ್ವಾಮೀಜಿಗೆ ಮಠದ ಆವರಣ ದಲ್ಲಿ ಸತ್ಯದರ್ಶನ ಸಭೆ ನಡೆಸಲು ಅನುಮತಿ ಸಿಕ್ಕಿಲ್ಲ.

    ಮಠಕ್ಕೆ ಸಂಬಂಧಪಟ್ಟವರಿಂದ ಅನುಮತಿ ಪತ್ರ ತಂದರೆ ಮುಂದಿನ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ, ಮಠದಿಂದ ಸಭೆಗೆ ಅನುಮತಿ ನೀಡಿಲ್ಲ. ಈ ಮಧ್ಯೆ, ಶನಿವಾರ ಸಂಜೆ ಮೂಜಗು ಹಾಗೂ ಉನ್ನತಾಧಿ ಕಾರ ಸಮಿತಿಯ ಸದಸ್ಯರನ್ನು ಭೇಟಿಯಾಗಿ ರ್ಚಚಿಸಿದ ಪೊಲೀಸ್ ಆಯುಕ್ತ ಆರ್. ದಿಲೀಪ್, ಐದೈದು ಜನರಂತೆ ಕರ್ತೃ ಗದ್ದುಗೆ ದರ್ಶನಕ್ಕೆ ಬಿಡಲಾಗುವುದು ಎಂದು ಹೇಳಿದ್ದಾರೆ.

    ಮಠದ ಒಳ-ಹೊರ ಆವರಣದಲ್ಲಿ ಭಾರಿ ಪೊಲೀಸ್ ಭದ್ರತೆ ಹಾಕಲಾಗಿದೆ. ಸಿಎಆರ್ ವಾಹನಗಳು ಬಂದು ನಿಂತಿವೆ. ಮಠದ ಆವರಣದಲ್ಲಿ ಕರ್ತೃ ಗದ್ದುಗೆಗೆ ತೆರಳಲು ಕಟಾಂಜನ ಹಾಕಿ, ಸರದಿಯಲ್ಲಿ ತೆರಳಲು ಮಾರ್ಗ ನಿರ್ವಿುಸಲಾಗಿದೆ. ಈ ಮಧ್ಯೆ, ಮಠದ ಉನ್ನತಾಧಿಕಾರ ಸಮಿತಿ ಸದಸ್ಯ ಶಂಕರಣ್ಣ ಮುನವಳ್ಳಿ, ದಾಸೋಹ ಸಮಿತಿ ಅಧ್ಯಕ್ಷ ವಿಜಯ ಶೆಟ್ಟರ್ ಅವರು ಮಠದ ಆವರಣದಲ್ಲಿ ದಿಂಗಾಲೇಶ್ವರ ಸ್ವಾಮಿಗಳ ಪರವಾಗಿರುವ ಪ್ರಕಾಶ ಬೆಂಡಿಗೇರಿ, ಗಿರಿಮಠ, ಶಿವಾನಂದ ಮುತ್ತಣ್ಣವರ, ಶೇಖಣ್ಣ ಬೆಂಡಿಗೇರಿ ಮೊದಲಾದವರ ಜೊತೆಗೆ ರ್ಚಚಿಸಿದರು.

    ಮಠದ ಆವರಣದಲ್ಲಿ ಸಭೆಗೆ ಅನುಮತಿ ಪಡೆದಿಲ್ಲ ಎಂದು ಹೇಳಿದಾಗ, ದಿಂಗಾಲೇಶ್ವರ ಸ್ವಾಮಿಗಳ ಪರ ಇದ್ದ ಮುಖಂಡರು ಈಗಾಗಲೇ ಬಿನ್ನಹ ಪತ್ರ ಕಳುಹಿಸಲಾಗಿದೆ ಎಂದರು. ವಿವಾದದ ವಾತಾವರಣ ತಿಳಿಗೊಳಿಸುವ ಕುರಿತು ರ್ಚಚಿಸಿದಾಗ, ಮೂಜಗು ಮತ್ತು ದಿಂಗಾಲೇಶ್ವರರು ಪರಸ್ಪರ ರ್ಚಚಿಸಿ ಒಮ್ಮತಕ್ಕೆ ಬಂದರೆ ತಮಗೆಲ್ಲ ಸಂತೋಷ ಎಂದು ಪ್ರಕಾಶ ಬೆಂಡಿಗೇರಿ, ಇತರರು ಹೇಳಿದರು. ನಂತರ ಮೂಜಗು ಅವರೊಂದಿಗೆ ಶಂಕರಣ್ಣ ಮುನವಳ್ಳಿ, ವಿಜಯ ಶೆಟ್ಟರ್ ಅವರು ಕೆಲ ಕಾಲ ರ್ಚಚಿಸಿದರು.

    ರಾತ್ರಿ 10.30ರ ಸುಮಾರಿಗೆ ಎರಡೆತ್ತಿನ ಮಠಕ್ಕೆ ತೆರಳಿ ದಿಂಗಾಲೇಶ್ವರ ಶ್ರೀಗಳನ್ನು ಭೇಟಿಯಾದ ಶಂಕರಣ್ಣ, ಶೆಟ್ಟರ್ ಅವರು ಅಂದಾಜು ಒಂದು ಗಂಟೆ ರ್ಚಚಿಸಿ ತೆರಳಿದರು. ಆದರೆ, ಸಂಧಾನ ಯತ್ನಗಳು ಫಲಪ್ರದವಾಗಲಿಲ್ಲ ಎಂದು ತಿಳಿದುಬಂದಿದೆ. ನಂತರ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಸ್ವಾಮೀಜಿ, ಸತ್ಯದರ್ಶನ ಸಭೆ ನಡೆದೇ ನಡೆಯುತ್ತದೆ. ಭಾನುವಾರ ಬೆಳಗ್ಗೆ ನೆಹರು ಮೈದಾನದಿಂದ ಮೆರವಣಿಗೆಯಲ್ಲಿ ಮಠಕ್ಕೆ ತೆರಳುತ್ತೇವೆ ಎಂದರು. ತಮ್ಮ ಮತ್ತು ಜಗದ್ಗುರುಗಳ ಮಧ್ಯೆ ಕಂದಕ ಸೃಷ್ಟಿಸುವ ಯತ್ನಗಳು ಕೆಲವರಿಂದ ನಡೆದಿದೆ. ಇದು ಸಲ್ಲದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts