More

    ಸಡಗರದ ಉದ್ಭವ ಸುಬ್ರಹ್ಮಣ್ಯ ರಥೋತ್ಸವ

    ಕುಶಾಲನಗರ: ಸಮೀಪದ ಕೂಡಿಗೆಯ ಉದ್ಭವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 54ನೇ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಜಯ ಘೋಷದೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.


    ಷಷ್ಠಿ ಅಂಗವಾಗಿ ದೇವರಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಯಜ್ಞೇಶ್ವರ ಐತಾಳ್ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಭಟ್ ತಂಡ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿತು. ಮಧ್ಯಾಹ್ನ 12 ಗಂಟೆಗೆ ದಿಗ್ಬಲಿ, ರಥಬಲಿ, ರಥಪೂಜೆ ನಡೆಸಿ ಸುಬ್ರಹ್ಮಣ್ಯ ದೇವರನ್ನು ರಥದಲ್ಲಿ ಕೂರಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಅಯ್ಯಪ್ಪ ವ್ರತಧಾರಿಗಳು ಕರ್ಪೂರದಲ್ಲಿ ದೇವರ ಚಿತ್ರಗಳನ್ನು ಬಿಡಿಸಿ, ಅಯ್ಯಪ್ಪ ಮತ್ತು ಸುಬ್ರಹ್ಮಣ್ಯ ದೇವರನ್ನು ಸ್ಮರಿಸಿದರು.


    ದೇವಸ್ಥಾನದಿಂದ ಹೊರಟ ರಥವನ್ನು ಸಂಪ್ರದಾಯದಂತೆ ಕೂಡುಮಂಗಳೂರು ಗ್ರಾಮದವರೆಗೆ ಭಕ್ತರು ಎಳೆದು ಪುನೀತರಾದರು. ರಥದ ಮುಂದೆ ವಿವಿಧ ಕಲಾ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ದಾರಿಯುದ್ದಕ್ಕೂ ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಸಂಜೆ 4 ಗಂಟೆ ಸುಮಾರಿಗೆ ರಥವನ್ನು ಮೂಲ ಸ್ಥಾನಕ್ಕೆ ತಂದು ನಿಲ್ಲಿಸಲಾಯಿತು.


    ದೇವಸ್ಥಾನ ನಿರ್ವಹಿಸುತ್ತಿರುವ ಟಾಟಾ ಕಾಫಿಯ ಉಪ ವ್ಯವಸ್ಥಾಪಕ ರೋಷನ್ ಸೋಮಯ್ಯ, ದೇವಾಲಯ ಸಮಿತಿ ಗೌರವ ಕಾರ್ಯದರ್ಶಿ ಮಂದಣ್ಣ, ಕಾರ್ಯದರ್ಶಿ ಶಮಂತ್ ರೈ, ಪೊನ್ನಪ್ಪ, ಕೂಡುಮಂಗಳೂರು ಗ್ರಾಮದ ಪ್ರಮುಖರಾದ ಕೆ.ಟಿ.ಅರುಣಕುಮಾರ್, ಸಣ್ಣಪ್ಪ, ಸುಗುಣಾನಂದ, ಕೆ.ರಾಜನ್, ಶಿವಕುಮಾರ್, ಶಶಿಕಿರಣ್, ಕೆ.ವರದ, ಬಿಜು, ನರೇಶ್, ಉದ್ಭವ ಸುಬ್ರಹ್ಮಣ್ಯಸ್ವಾಮಿ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.


    ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಬಂದೋಬಸ್ತ್ ನಿಯೋಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts