More

    ಸಕ್ಕರೆ ಕಾರ್ಖಾನೆಗಳಿಗೆ ಡಿಸಿ ಎಚ್ಚರಿಕೆ

    ಬೆಳಗಾವಿ: ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವ ಮುನ್ನ ಕಬ್ಬು ಸಾಗಾಟ, ಕಟಾವು ವೆಚ್ಚ ಹಾಗೂ ಟನ್ ಕಬ್ಬಿಗೆ ನಿಗದಿಪಡಿಸಿದ ದರವನ್ನು ಲಿಖಿತ ರೂಪದಲ್ಲಿ ಜಿಲ್ಲಾಡಳಿತ, ಸಕ್ಕರೆ ಆಯುಕ್ತರಿಗೆ ಹಾಗೂ ರೈತರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದರು.
    ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರು ಮತ್ತು ರೈತರ ಸಮಸ್ಯೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಳುವರಿ ಆಧಾರದ ಮೇಲೆ ನಿಗದಿಪಡಿಸಿದ ನ್ಯಾಯಯುತ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಬೆಳೆಗಾರರ ಕೈಗೆ ಸಿಗಬೇಕು. ಸಾಗಾಟ, ಕಟಾವು ವೆಚ್ಚವನ್ನು ಬೇಕಾಬಿಟ್ಟಿ ಹೆಚ್ಚಿಸುವಂತಿಲ್ಲ ಎಂದು ಸೂಚಿಸಿದರು.

    ಕಬ್ಬು ಬೆಳೆಗಾರರು ತಾವೇ ಕಬ್ಬು ಕಟಾವು ಮತ್ತು ಸಾಗಾಣಿಕೆ ಮಾಡಿಕೊಂಡು ಬಂದರೆ ಅವರ ಕಬ್ಬನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಇಂತಹ ರೈತರಿಗೆ ಜಿಲ್ಲಾಡಳಿತ, ಪೊಲೀಸರು ಭದ್ರತೆ ಒದಗಿಸುತ್ತಾರೆ. ಅಲ್ಲದೆ, ಈ ರೈತರಿಂದ ಸಕ್ಕರೆ ಕಾರ್ಖಾನೆಗಳು ಯಾವುದೇ ರೀತಿಯ ಸಾಗಾಟ, ಕಟಾವು ವೆಚ್ಚವನ್ನು ತೆಗೆದುಕೊಳ್ಳಬಾರದು. ಅಲ್ಲದೆ, ಕಾರ್ಖಾನೆಗಳಿಂದ 15 ಮತ್ತು 50 ಕಿಮೀ ದೂರದಿಂದ ಕಬ್ಬು ಕಳುಹಿಸುವ ರೈತರಿಂದ ಕಬ್ಬು ಸಾಗಾಟ, ಕಟಾವು ವೆಚ್ಚ ಬೇರೆ ಬೇರೆ ನಿಗದಿಪಡಿಸಬೇಕು. ಕಾರ್ಖಾನೆಗಳ ಪಕ್ಕದಲ್ಲಿರುವವರಿಗೆ ಕಟಾವು, ಸಾಗಾಟ ವೆಚ್ಚ ಕಡಿಮೆ ವಿಧಿಸಬೇಕು ಎಂದರು.

    2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಟನ್ ಕಬ್ಬಿನ ದರ ಎಷ್ಟು? ಕಟಾವು ಮತ್ತು ಸಾಗಾಟ ವೆಚ್ಚ ಎಷ್ಟು ನಿಗದಿ ಪಡಿಸಲಾಗಿದೆ ಎಂಬುದನ್ನು ಎಲ್ಲ ಸಕ್ಕರೆ ಕಾರ್ಖಾನೆಗಳು ನೋಟಿಸ್ ಬೋರ್ಡ್‌ನಲ್ಲಿ ಅಂಟಿಸಬೇಕು. ಪತ್ರಿಕಾ ಪ್ರಕಟಣೆಗಳ ಮೂಲಕ ರೈತರಿಗೆ ತಿಳಿಸಬೇಕು. ನಿರ್ಲಕ್ಷೃ ಮಾಡಿದರೆ ಪೊಲೀಸರ ಸಮೇತ ಕಾರ್ಖಾನೆಗಳಿಗೆ ಬಂದು ಕ್ರಮ ವಹಿಸಲಾಗುವುದು ಎಂದು ಸಕ್ಕೆರೆ ಕಾರ್ಖಾನೆಗಳ ಎಂಡಿಗಳಿಗೆ ಎಚ್ಚರಿಕೆ ನೀಡಿದರು.

    ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರಗಳ ಪರಿಶೀಲನೆಗೆ ರಚನೆ ಮಾಡಿರುವ ತಂಡಗಳು ಖುದ್ದಾಗಿ ಪರಿಶೀಲಿಸಿ ವರದಿ ನೀಡಬೇಕು. ಅಲ್ಲದೆ, ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿರುವ ಕುರಿತು ರೈತರು ಮಾಹಿತಿ ನೀಡಿದರೆ ತಕ್ಷಣ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಜಿಪಂ ಸಿಇಒ ದರ್ಶನ್ ಎಚ್.ವಿ., ಎಸ್‌ಪಿ ಸಂಜೀವ ಪಾಟೀಲ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿ.ಕಂಕಣವಾಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts