More

    ಸಂಸ್ಕಾರಯುತ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ ಸಾಧ್ಯ


    ನಾಗಮಂಗಲ: ಜೀವನದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆಯುವುದು ಬಹು ಮುಖ್ಯ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

    ಪಟ್ಟಣದ ಟಿಬಿ ಬಡಾವಣೆಯ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಚಿವನಾಗಿ ಬಂದಿದ್ದೇನೆ ಎಂಬುದಕ್ಕಿಂತ ಮಠದ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ನೋಡಲು ಅವಕಾಶ ಸಿಕ್ಕಿರುವುದು ಬಹಳ ಸಂತೋಷ ನೀಡಿದೆ. ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುವ ಶಿಕ್ಷಣ ಮಕ್ಕಳಿಗೆ ದೊರಕುತ್ತಿರುವುದು ಬಹು ವಿಶೇಷ ಎಂದರು.

    ಪದವಿ ಪಡೆದು ನೌಕರಿ ಗಿಟ್ಟಿಸಿಕೊಳ್ಳುವುದೇ ಜೀವನದ ಉದ್ದೇಶ ಆಗಬಾರದು. ಸಂಸ್ಕಾರ ಸಹಿತ ಶಿಕ್ಷಣದಿಂದ ಜ್ಞಾನದೊಂದಿಗೆ ವ್ಯಕ್ತಿತ್ವವೂ ವಿಕಸನಗೊಳ್ಳಬೇಕು ಎಂದರು.
    ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಇಚ್ಛಾಶಕ್ತಿಯೊಂದಿಗೆ ದೃಢವಾದ ಸಂಕಲ್ಪ ಇದ್ದವರು ಏನು ಬೇಕಾದರೂ ಸಾಧಿಸುತ್ತಾರೆ. ಕೇವಲ ಎಸ್ಸೆಸ್ಸ್ಸೆಲ್ಸಿ ಓದಿದ ವ್ಯಕ್ತಿ ಭಾರತರತ್ನಕ್ಕೆ ಭಾಜನರಾಗಿದ್ದಾರೆ. ಇದಕ್ಕೆ ನಿಗದಿತ ಕ್ಷೇತ್ರದಲ್ಲಿ ಛಲ ಮತ್ತು ಸೇವಾ ಮನೋಭಾವ ಬಹುಮುಖ್ಯ ಎಂದರು.


    ತಾಳ್ಮೆ ಮತ್ತು ಸಹನೆ ಇದ್ದರೆ ಯಾವುದೇ ರಂಗದಲ್ಲಿ ಅದ್ಭುತವಾಗಿ ಸಾಧನೆ ಮಾಡಬಹುದು. ಕ್ರೀಡೆ ಮತ್ತು ಸಾಂಸ್ಕೃತಿಕ ರಂಗದ ಪರಂಪರೆ ಉಳಿಸುವ ಜವಾಬ್ದಾರಿ ಇಂದಿನ ಯುವಪೀಳಿಗೆ ಮೇಲಿದೆ. ಅನಕ್ಷರಸ್ಥರಾಗಿದ್ದ ಪೂರ್ವಜರು ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಇನ್ನು ವಿದ್ಯಾವಂತರಾಗಿರುವ ಇಂದಿನ ಯುವಜನರು ನಮ್ಮ ನೆಲದ ಮಹತ್ವ ಉಳಿಸಲು ಕಷ್ಟವೇನಿಲ್ಲ ಎಂದರು.

    ಸಾಧಕರು ಹೊರಬರಲಿ: ಕ್ರಿಕೆಟ್ ಮಾಜಿ ಆಟಗಾರ ದೊಡ್ಡ ಗಣೇಶ್ ಮಾತನಾಡಿ, ಮಠದ ಹೆಸರು ಇಷ್ಟು ದೊಡ್ಡಮಟ್ಟದಲ್ಲಿ ಖ್ಯಾತವಾಗಿದೆ ಎಂದರೆ ಅದಕ್ಕೆ ಇಲ್ಲಿರುವ ಶಿಸ್ತು ಕಾರಣ. ಇಂಥ ಶಿಕ್ಷಣ ಸಂಸ್ಥೆಯಿಂದ ಇನ್ನಷ್ಟು ಸಾಧಕರು ಹೊರಬರಲಿ ಎಂದರು. ಪಾಲಕರು ಮಕ್ಕಳಿಗೆ ಯಾವುದೇ ಒತ್ತಡ ಹಾಕುವುದು ಬೇಡ. ಮಕ್ಕಳಿಗೆ ಅವರ ಇಚ್ಛೆಯಂತೆ ಬಿಡಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
    ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿವಿಧ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂಧಿಸಿದರು. ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.

    ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ವಾರ್ಷಿಕ ಸಂಚಿಕೆ ‘ಗಿರಿಕುಸುಮ’ ವನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಡಾ. ರಾಮೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ಟಿ.ಕೃಷ್ಣೇಗೌಡ, ಪ್ರಾಂಶುಪಾಲ ಡಾ. ರವೀಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts