More

    ಸಂತರ ಚಿಂತನೆಯಲ್ಲಿ ಅಡಗಿದೆ ಯಶಸ್ಸು


    ಚಿತ್ರದುರ್ಗ: ಸಂತ ಶ್ರೀ ಸೇವಾಲಾಲ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಹೇಳಿದರು.
    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
    ವಿಜ್ಞಾನಿಗಳು, ದಾರ್ಶನಿಕರು, ಸಂತರು, ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಸೇವಾಲಾಲ್ ಅವರ ಆದರ್ಶಗಳು ನಮ್ಮ ಮುಂದಿವೆ. ಅವರ ಚಿಂತನೆಗಳನ್ನು ಅಳವಡಿಸಿಕೊಂಡು, ಅವರು ತೋರಿರುವ ಮಾರ್ಗದರ್ಶನದೊಂದಿಗೆ ಸಾಗಿದರೆ ಜೀವನದಲ್ಲಿ ಯಶಸ್ಸು ಖಚಿತ ಎಂದರು.
    ಜಿಲ್ಲಾ ಬಂಜಾರ ಸಂಘದ ಕಾರ್ಯದರ್ಶಿ ಕೆ.ಮಂಜುನಾಥ ನಾಯ್ಕ ಮಾತನಾಡಿ, ಎಲ್ಲ ಸಮುದಾಯಗಳಲ್ಲೂ ಜನಿಸಿರುವ ದಾರ್ಶನಿಕರು ತಮ್ಮ ಜ್ಞಾನವನ್ನು ಸರ್ವ ಸಮುದಾಯ, ಸಮಾಜಕ್ಕೆ ಧಾರೆ ಎರೆದಿದ್ದಾರೆ. ಸೇವಾಲಾಲ್ ಅವರನ್ನು ಮಹಾಜ್ಞಾನಿ, ತ್ರಿಕಾಲ ಜ್ಞಾನಿ ಎಂದೂ ಕರೆಯುತ್ತೇವೆ. ಲಂಬಾಣಿ ಸಮುದಾಯ ಮಾನವ ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತದೆ ಎಂದು ತಿಳಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಆರ್.ನಾಗೇಂದ್ರನಾಯ್ಕ ಮಾತನಾಡಿ, ಪವಾಡ ಪುರುಷ ಸೇವಾಲಾಲ್ ಮಹಾರಾಜರು ಹಸಿದವರಿಗೆ ಊಟ, ಬಾಯಾರಿದವರಿಗೆ ನೀರು ಕೊಡಿ, ಜೀವನದಲ್ಲಿ ಕ್ರೋಧ ಎಂಬುದನ್ನು ಸುಟ್ಟು ಹಾಕಿ, ಇದೇ ಧರ್ಮ, ಇದೇ ಸತ್ಯದ ಮಾರ್ಗ ಎಂಬ ಸಂದೇಶ ನೀಡಿದ್ದಾರೆ. ಸೇವಾಲಾಲರ ಜೀವನ ಚರಿತ್ರೆ ರೋಮಾಂಚಕಾರಿಯಾಗಿದೆ. ಸತ್ಯ, ನ್ಯಾಯದ ಮಾರ್ಗ ಹೇಗಿರಬೇಕು ಎಂದು ಅವರು ತೋರಿಸಿದ್ದಾರೆ. ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಅರಿಯಬೇಕಿದೆ ಎಂದರು.
    ಬಂಜಾರ ಸಮಾಜ ವಿಶಿಷ್ಟ ಸಂಪ್ರದಾಯ, ಉಡುಗೆ-ತೊಡುಗೆಯೊಂದಿಗೆ ವಿಶೇಷ ಆಚರಣೆಗಳನ್ನು ರೂಢಿಸಿಕೊಂಡು ಬಂದಿದೆ. ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಮುಖ್ಯ. ಸರ್ಕಾರ ಲಂಬಾಣಿ ತಾಂಡಾಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು, ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.
    ಕನ್ನಡ ಉಪನ್ಯಾಸಕ ಟಿ.ಎಲ್.ನಾರಾಯಣ್ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಸಂಘದ ಗೌರವಾಧ್ಯಕ್ಷ ಜಿ.ರಾಜನಾಯ್ಕ, ರಮೇಶ್‌ನಾಯ್ಕ, ಪ್ರಕಾಶ್‌ನಾಯ್ಕ, ಜಗದೀಶ್ ನಾಯ್ಕ, ವಸಂತನಾಯ್ಕ, ತಿಪ್ಪನಾಯ್ಕ, ಜಯರಾಂ, ವೆಂಕಟೇಶ್‌ನಾಯ್ಕ, ಮಾಧವನಾಯ್ಕ, ಸುಮೀತ್‌ಕುಮಾರ್, ಚೆನ್ನಯ್ಯನಹಟ್ಟಿ ಗ್ರಾಪಂ ಸದಸ್ಯೆ ಕಾವ್ಯಾಬಾಯಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಆಯಿತೋಳ ಜಗದೀಶ್ ತಂಡದವರು ಗೀತಗಾಯನ ನಡೆಸಿಕೊಟ್ಟರು.

    *ಕೋಟ್
    ಚಿತ್ರದುರ್ಗ ತಾಲೂಕಿನಲ್ಲಿ ಈಗಾಗಲೇ ಲಂಬಾಣಿ ತಾಂಡಗಳೂ ಒಳಗೊಂಡಂತೆ ದಾಖಲೆ ರಹಿತ ಗ್ರಾಮಗಳನ್ನು, ಕಂದಾಯ ಗ್ರಾಮಗಳನ್ನಾಗಿ ಗುರುತಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 2ನೇ ಹಂತದಲ್ಲಿ ಹೊಸದಾಗಿ 13 ಕಂದಾಯ ಗ್ರಾಮಗಳನ್ನಾಗಿ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    ಡಾ.ನಾಗವೇಣಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts