More

    ಸಂಗ್ರಹಣೆಯತ್ತ ಬೆಳೆಗಾರರ ಚಿತ್ತ

    ಹಾವೇರಿ: ಕರೊನಾ ಲಾಕ್​ಡೌನ್ ಪರಿಣಾಮ ಉಳ್ಳಾಗಡ್ಡಿಯ ದರ ಕುಸಿದಿದೆ. ಹೀಗಾಗಿ, ಗೂಡು ಹಾಕಿ ಉಳ್ಳಾಗಡ್ಡಿ ಸಂಗ್ರಹಿಸಿಡುವ ಕಾರ್ಯಕ್ಕೆ ತಾಲೂಕಿನ ರೈತರು ಮುಂದಾಗಿದ್ದಾರೆ.

    ತಾಲೂಕಿನ ತೋಟದಯಲ್ಲಾಪುರ ಗ್ರಾಮದ ರೈತರಾದ ನಿಂಗಪ್ಪ ಮಲ್ಲಪ್ಪ ಯರೆಸೀಮಿ ಹಾಗೂ ವಿನಾಯಕ ಮಲ್ಲಪ್ಪ ಯರೆಸೀಮಿ ಸಹೋದರರು 2 ಎಕರೆ ಜಮೀನಿನಲ್ಲಿ ಉಳ್ಳಾಗಡ್ಡಿ, ಬೆಂಡಿಕಾಯಿ, ಶುಂಠಿಯನ್ನು ಬೇಸಿಗೆ ಬೆಳೆಯಾಗಿ ಬೆಳೆದಿದ್ದರು. ಫಸಲು ಕೈಗೆ ಬರುತ್ತಿದ್ದಂತೆಯೇ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಬೆಲೆಯೇ ಇಲ್ಲದಂತಾಯಿತು. ಹೀಗಾಗಿ, ಬೆಂಡಿಕಾಯಿ ಹಾಗೂ ಶುಂಠಿಯನ್ನು ಸಿಕ್ಕ ಅಲ್ಪ ಬೆಲೆಗೆ ಮಾರಾಟ ಮಾಡಿದರು.

    ಉಳ್ಳಾಗಡ್ಡಿ ಮಾರಾಟಕ್ಕೆ ಮುಂದಾದಾಗ ಕ್ವಿಂಟಾಲ್​ಗೆ 800ರಿಂದ 1 ಸಾವಿರ ರೂ. ದರವಿರುವುದು ತಿಳಿಯಿತು. 10 ಗುಂಟೆ ಪ್ರದೇಶದಲ್ಲಿ 15 ಕ್ವಿಂಟಾಲ್​ನಷ್ಟು ಇಳುವರಿ ತೆಗೆದಿರುವ ಈ ರೈತರು, ಅಗ್ಗದ ದರಕ್ಕೆ ಉಳ್ಳಾಗಡ್ಡಿ ಮಾರಾಟ ಮಾಡುವ ಬದಲು ಗೂಡುಕಟ್ಟಿ ಕೆಲ ದಿನಗಳ ಕಾಲ ಸಂಗ್ರಹಿಸಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಂತೆ ಶೆಡ್​ವೊಂದರಲ್ಲಿ ಉಳ್ಳಾಗಡ್ಡಿಯನ್ನು ಗೂಡು ಕಟ್ಟಿ ಸಂಗ್ರಹಿಸಿಡುತ್ತಿದ್ದಾರೆ. ಹೀಗೆ ಗೂಡುಗಳನ್ನು ಸಂಗ್ರಹಿಸಿಟ್ಟರೆ ಕನಿಷ್ಠ ಒಂದೂವರೆ ತಿಂಗಳು ಫಸಲು ರಕ್ಷಿಸಿಕೊಳ್ಳಬಹುದು. ಒಂದೂವರೆ ತಿಂಗಳ ಅವಧಿಯಲ್ಲಿ ಉತ್ತಮ ದರ ಬಂದರೆ ಮಾರಾಟ ಮಾಡುತ್ತೇವೆ. ಇಲ್ಲವಾದರೆ, ಸಿಕ್ಕ ದರಕ್ಕೆ ಮಾರುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ರೈತ ನಿಂಗಪ್ಪ ಯರೆಸೀಮಿ.

    ‘ಸರ್ಕಾರವು ಹೂವು ಬೆಳೆಗಾರರಿಗೆ ಈಗಾಗಲೇ ಪ್ಯಾಕೇಜ್ ಘೋಷಿಸಿದೆ. ಅದರಂತೆ, ತೋಟಗಾರಿಕೆ ಬೆಳೆ ಬೆಳೆದು ನಷ್ಟ ಅನುಭವಿಸಿರುವ ರೈತರಿಗೂ ವಿಶೇಷ ಪ್ಯಾಕೇಜ್ ಘೋಷಿಸಿ ನೆರವು ಕಲ್ಪಿಸಬೇಕು. ಇದರಿಂದಾಗಿ, ಮುಂಗಾರಿನಲ್ಲಿ ಬಿತ್ತನೆ ರೈತರಿಗೆ ಅನುಕೂಲವಾಗಲಿದೆ. ಗೂಡುಕಟ್ಟಿ ಉಳ್ಳಾಗಡ್ಡಿ ಸಂಗ್ರಹಿಸಿದ್ದು ಉತ್ತಮ ಕಾರ್ಯ. ಜಿಲ್ಲೆಯ ರೈತರು ಮುಂಗಾರಿನಲ್ಲಿ ಮಾತ್ರ ಈ ರೀತಿ ಮಾಡುತ್ತಿದ್ದರು. ಬೇಸಿಗೆ ಉಳ್ಳಾಗಡ್ಡಿಯನ್ನು ಗೂಡು ಕಟ್ಟಿ ಸಂಗ್ರಹಿಸುವುದು ಕಡಿಮೆ ಎನ್ನುತ್ತಾರೆ ರೈತರಾದ ಮಾಲತೇಶ ಕಜ್ಜರಿ, ಸದಾನಂದ ಹಿರೇಮಠ, ಕೃಷಿ ಸಲಹೆಗಾರ ಡಾ. ಜಿ.ಎಸ್. ಕುಲಕರ್ಣಿ.

    ವ್ಯಾಪಾರಿಗಳಿಂದ ಅನ್ಯಾಯ: ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಹಾವೇರಿ ತಾಲೂಕಿನಲ್ಲಿ 508 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಉಳ್ಳಾಗಡ್ಡಿ ಬೆಳೆಯಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 800ರಿಂದ 1,200ರೂ. ದರವಿದೆ. ಪುಣೆ ಉಳ್ಳಾಗಡ್ಡಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ಸ್ಥಳೀಯ ರೈತರ ಉಳ್ಳಾಗಡ್ಡಿಗೆ ಕಡಿಮೆ ದರ ಸಿಗುತ್ತಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ಬಸವರಾಜ ಬರೇಗಾರ ಅವರು ಎಪಿಎಂಸಿ ಹರಾಜು ಮಾರುಕಟ್ಟೆಗೆ ಭೇಟಿ ನೀಡಿ, ‘ಸ್ಥಳೀಯ ರೈತರ ಉಳ್ಳಾಗಡ್ಡಿಯನ್ನೇ ಮೊದಲು ಖರೀದಿಸಬೇಕು. ಅವರ ಬೆಳೆ ಮುಗಿದ ನಂತರ ಹೊರಗಿನ ಉಳ್ಳಾಗಡ್ಡಿ ಮಾರಾಟ ಮಾಡಬೇಕು’ ಎಂದು ಸೂಚನೆ ನೀಡಿದ್ದಾರೆ. ಆದರೂ ವ್ಯಾಪಾರಸ್ಥರು ಹೆಚ್ಚಿನ ದರವನ್ನು ತಮಗೆ ನೀಡುತ್ತಿಲ್ಲ ಎಂಬುದು ರೈತರ ದೂರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts