More

    ಸಂಗೀತ ಸಂಭ್ರಮ ಸಮಾರೋಪ- ಮಠಗಳು ಸಂಗೀತ ಕಲಾವಿದರ ತಾಯಿಬೇರು- ಕೇದಾರಲಿಂಗ ಶಿವಶಾಂತವೀರ ಶ್ರೀ

    ದಾವಣಗೆರೆ: ಮಠ-ಮಂದಿರಗಳು, ಸಂಗೀತ ಕಲಾವಿದರ ಮೂಲ ತಾಯಿಬೇರು ಎಂದು ಚನ್ನಗಿರಿಯ ಕೇದಾರ ಶಾಖಾ ಮಠದ ಶ್ರೀ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಸಂಗೀತ ಕಲಾವಿದರು ಆರ್ಥಿಕವಾಗಿ ಹಿಂದುಳಿದವರು. ಸ್ವಾತಂತ್ರ್ಯಪೂರ್ವದಿಂದಲೂ ಕಲಾವಿದರು ತಬಲಾ, ಹಾರ‌್ಮೋನಿಯಂ ಮೊದಲಾದ ಸಂಗೀತ ವಾದ್ಯಗಳೊಂದಿಗೆ ಹಳ್ಳಿಗಳಿಗೆ ಬಂದು ಸಂಗೀತ ಸೇವೆ ನೀಡಿ ಬಿಡಿಗಾಸು ಹಣ ಪಡೆದು ಹೋಗುತ್ತಿದ್ದರು. ಇಂತಹ ಜನರಿಗೆ ಂಠ-ಮಂದಿರಗಳು ಅನ್ನ- ಆಶ್ರಯದ ಜತೆಗೆ ಬದುಕು ಕಟ್ಟಿಕೊಟ್ಟಿವೆ ಎಂದು ಹೇಳಿದರು.
    ವಿಶ್ವದಲ್ಲೇ ಸಂಗೀತ ಮತ್ತು ಜಾನಪದ ಕಲೆಗಳ ತವರೂರು ಆಗಿ ಭಾರತ ಉಳಿದಿದೆ. ದೇಶದಲ್ಲಿ ಪುರಾತನ ಕಾಲದಿಂದಲೂ ತಮ್ಮ ಸಂಸಾರ ಹಾಗೂ ಕಾಯಕದ ಜತೆಗೆ ಉಳಿಸಿಕೊಂಡು ಬಂದಿರುವ ಜಾನಪದ, ಲಾವಣಿ ಮೊದಲಾದ ಸಂಗೀತ ಸಾಂಸ್ಕೃತಿಕ ಮೌಲ್ಯವಾಗಿ ಉಳಿದುಬಂದಿದೆ ಎಂದು ತಿಳಿಸಿದರು.
    ಮನರಂಜನೆಗೆ ಸೀಮಿತವಾದ ಈ ಕಾಲದಲ್ಲಿ ಕಲೆ-ಸಂಸ್ಕೃತಿ ನಮ್ಮಿಂದ ದೂರವಾಗುತ್ತಿವೆ. ಇದರ ನಡುವೆ ಕೆಲವೇ ಅಧಿಕಾರಿಗಳು, ಸಂಘಟಕರು ದಾವಣಗೆರೆಯಲ್ಲಿ ಕಲಾವಿದರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ರಾಜಕಾರಣಿ ಮತ್ತು ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ದೇಶಸೇವೆ ಹಾಗೂ ಜನಸೇವೆ ಮಾಡಿದಲ್ಲಿ ದೇಶ ಸುಭಿಕ್ಷವಾಗಲಿದೆ ಎಂದು ಹೇಳಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ 58 ವರ್ಷ ಪೂರೈಸಿದ ಕಲಾವಿದರಿಗೆ ಮಾಸಾಶನ ಸಲ್ಲಿಸಲು ಅವಕಾಶಗಳಿವೆ. 20 ವರ್ಷದಲ್ಲಿ ಸಲ್ಲಿಸಿದ ಸಂಗೀತ, ನಾಟಕ ಕಲಾಸೇವೆ ಕುರಿತಂತೆ ದಾಖಲೆಗಳು, ಛಾಯಾಚಿತ್ರ, ಜನ್ಮದಿನಾಂಕ ದೃಢೀಕರಣ ಪತ್ರ ಇತ್ಯಾದಿಯನ್ನು ಸಲ್ಲಿಸಿದಲ್ಲಿ ಮಾಸಾಶನಕ್ಕೆ ಶಿಫಾರಸು ಮಾಡಿ ಕಳಿಸಲಾಗುವುದು ಎಂದರು.
    ಭಜನೆ, ಜಾನಪದ ಕಲೆ, ನಾಟಕ ಪ್ರದರ್ಶನ ನೀಡುವ ಆಸಕ್ತ ಕಲಾವಿದರು 15 ದಿನ ಮುನ್ನವೇ ಸೇವಾಸಿಂಧು ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅವರಿಗೆ 10 ಸಾವಿರ ರೂ.ನಿಂದ 25 ಸಾವಿರ ರೂ. ನೆರವು ಸಿಗಲಿದೆ. ಇದರ ಪ್ರಯೋಜನ ಪಡೆಯಬೇಕೆಂದರು.
    ಹೊನ್ನಾಳಿ ಆಕಾಶವಾಣಿ ಕಲಾವಿದೆ ಶಾಂತಾದೇವಿ ಹಿರೇಮಠ ಮಾತನಾಡಿ ನಾಡಿನಲ್ಲಿ ಮಠಗಳೇ ಇಲ್ಲವಾಗಿದ್ದರೆ ಕಲಾವಿದರ ಬದುಕು ದುಸ್ತರವಾಗಿರುತ್ತಿತ್ತು. ಸಂಗೀತ ಕಲೆಗಳು ಮಠಗಳಿಂದಲೇ ಉಳಿದಿವೆ ಎಂದರು,.
    ಹೊನ್ನಾಳಿ ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎ.ಜಿ.ಹೇಮಲತಾ, ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷೆ ಎಸ್.ಜಿ.ಶಾಂತಾ, ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಎನ್.ಎಸ್.ರಾಜು, ವೀರಸಂಗಯ್ಯ ಇದ್ದರು. ದಾವಣಗೆರೆಯ ಎಂ.ಕೆ.ರೇವಣಸಿದ್ದಪ್ಪ, ಪಿ.ಶಂಭುಲಿಂಗಪ್ಪ, ಗದಗದ ವಾಣಿ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts