More

    ಸಂಕಷ್ಟದಲ್ಲಿ ಹೋಟೆಲ್ ಉದ್ಯಮ

    ವಿರಾಜಪೇಟೆ: ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಹೋಟೆಲ್ ಉದ್ಯಮ ತೀರಾ ಸಂಕಷ್ಟಕ್ಕೆ ಒಳಗಾಗಿದ್ದು, ಕೇವಲ ಬೆರಳೆಣಿಕೆಯ ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.
    ಹೋಟೆಲ್ ಉದ್ಯಮ ಬಂದ್ ಆಗಿರುವುದರಿಂದ ಮಾಲೀಕರು ದಿನನಿತ್ಯ ನಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ ಕಾರ್ಮಿಕರು ಉದ್ಯೋಗವಿಲ್ಲದೆ ಅತಂತ್ರರಾಗಬೇಕಾದ ಸ್ಥಿತಿ ಎದುರಾಗಿದೆ. ಹೊರ ರಾಜ್ಯ ಹಾಗೂ ಹೊರಜಿಲ್ಲೆಯ ಪರಿಣಿತ ನೌಕರರನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
    ಜಿಲ್ಲೆ ಹಸಿರು ವಲಯದಲ್ಲಿರುವುದರಿಂದ ಜಿಲ್ಲಾಡಳಿತವು ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ನೀಡಿದೆ. ಆದರೂ ಬೆರಳೆಣಿಕೆಯಷ್ಟು ಹೋಟೆಲ್‌ಗಳು ಮಾತ್ರ ವಹಿವಾಟು ಆರಂಭಿಸಿವೆ. ಪಟ್ಟಣದ ಸುತ್ತಮುತ್ತ 50ಕ್ಕೂ ಅಧಿಕ ಹೋಟೆಲ್‌ಗಳಿವೆ. ಆದರೆ ಶೇ.90ರಷ್ಟು ಹೆಚ್ಚಿನ ಹೋಟೆಲ್‌ಗಳು ಬಾಗಿಲು ತೆರೆದಿಲ್ಲ. ಯಾವುದೇ ವಹಿವಾಟು ಇಲ್ಲದಿದ್ದರೂ ಮಾಲೀಕರು ಕಟ್ಟಡ ಬಾಡಿಗೆ, ನೌಕರರ ಯೊಗಕ್ಷೇಮ, ವಿದ್ಯುತ್ ಬಿಲ್‌ಗಳನ್ನು ಪಾವತಿಸುವಂತಾಗಿದೆ.
    ಪಟ್ಟಣದಲ್ಲಿರುವ ಕೆಲ ಹೋಟೆಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಣಸಿಗರು ಉತ್ತರ ಭಾರತ ಮೂಲದವರು. ಹೀಗಾಗಿ ಕರೊನಾ ಭೀತಿಯಿಂದ ಕೆಲವರು ತಮ್ಮ ಊರುಗಳಿಗೆ ತೆರಳಿದ್ದರೆ, ಉಳಿದವರು ಸಹ ಹೋಗುವ ಆಲೋಚನೆಯಲ್ಲಿದ್ದಾರೆ. ಆದರೆ ಊರಿಗೆ ಹೋದವರು ಮರಳುವ ಖಾತ್ರಿ ಇಲ್ಲ.
    ‘ರಾಜ್ಯ ಸರ್ಕಾರ ಸಂಚಾರ ನಿರ್ಬಂಧ ವಿಧಿಸಿರುವುದರಿಂದ ಪರ ಊರು ಹಾಗೂ ರಾಜ್ಯಗಳಿಂದ ಜನ ಬರುತ್ತಿಲ್ಲ. ಸ್ಥಳೀಯರು ಕೂಡ ಸೋಂಕಿನ ಭೀತಿಯಿಂದ ಹೋಟೆಲ್‌ಗೆ ಬರುತ್ತಿಲ್ಲ’ ಎಂದು ಕಳೆದ 50 ದಿನಗಳಿಂದ ಬಂದ್ ಆಗಿರುವ ಬದ್ರಿಯಾ ಹೋಟೆಲ್ ಮಾಲೀಕ ಅಜೀಜ್ ಆಳಲು ತೋಡಿಕೊಳ್ಳುತ್ತಾರೆ.
    ‘ಪ್ರತಿ ವರ್ಷವೂ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಇದರಿಂದ ಉತ್ತಮ ವಹಿವಾಟು ನಡೆಯುತ್ತಿತ್ತು. ಆದರೀಗ ಕರೊನಾ ವೈರಸ್‌ನಿಂದ ಹೋಟೆಲ್ ಉದ್ಯಮ ದೊಡ್ಡ ಪ್ರಮಾಣದ ನಷ್ಟ ಅನುಭವಿಸುತ್ತಿದೆ. ಅಲ್ಲದೇ ಮುಂದಿನ ತಿಂಗಳಿನಿಂದ ಮಳೆಗಾಲ ಆರಂಭವಾಗುವುದರಿಂದ, ಮುಂದಿನ 4 ರಿಂದ 5 ತಿಂಗಳು ಉತ್ತಮ ವಹಿವಾಟು ನಿರೀಕ್ಷಿಸಲಾಗದು. ಕಳೆದ ಒಂದು ವಾರದಿಂದ ಪಾರ್ಸೆಲ್ ಸೇವೆ ಒದಗಿಸುತ್ತಿದ್ದರೂ, ಹಿಂದಿನ ವಹಿವಾಟಿನ ಶೇ.20 ರಷ್ಟು ವ್ಯಾಪಾರ ನಡೆಯುತ್ತಿಲ್ಲ. ಆದರೂ, ಗ್ರಾಹಕರನ್ನು ಕಳೆದುಕೊಳ್ಳಬಾರದು ಎಂಬ ದೃಷ್ಟಿಯಿಂದ ಕಾರ್ಯನಿರ್ವಹಿಸಲಾಗುತ್ತಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕ ಬಿ.ಜೆ ಬೋಪಣ್ಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts