More

    ಸಂಕಷ್ಟದಲ್ಲಿರುವ ಜಿಲ್ಲೆಯ ರೈತರು

    ಸೋಮವಾರಪೇಟೆ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸರ್ಕಾರ ಸೋತಿದೆ. ಅರಣ್ಯ ಇಲಾಖೆ ಅಸಡ್ಡೆ, ಅವೈಜ್ಞಾನಿಕ ಆಡಳಿತ ವೈಖರಿಯಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಾಮಾಡ ಮನುಸೋಮಯ್ಯ ಹೇಳಿದರು.


    ಪಟ್ಟಣದ ಸಫಾಲಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ಕಳೆದ ಒಂದು ದಶಕದಿಂದ ಅಕಾಲಿಕ ಮಳೆ, ಭೂಕುಸಿತ, ಧಾರಾಕಾರ ಮಳೆಯಿಂದ ರೈತರ ಕೃಷಿ ಫಸಲು ಹಾನಿಯಾಗುತ್ತಿದೆ. ಆದರೆ ಸೂಕ್ತ ಪರಿಹಾರ ಸಿಗದೆ, ರೈತರು, ಕಾಫಿ, ಕಾಳುಮೆಣಸು ಬೆಳೆಗಾರರು ನಷ್ಟದ ಹಾದಿಯಲ್ಲಿದ್ದಾರೆ ಎಂದು ತಿಳಿಸಿದರು.


    ಆನೆ-ಮಾನವ ಸಂಘರ್ಷ ಮಿತಿಮೀರಿದೆ. ರೈತರ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.21ರಂದು ರೈತಸಂಘದಿಂದ ಮಡಿಕೇರಿ ಚಲೋ ಹಾಗೂ ಅರಣ್ಯ ಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಹೋರಾಟದ ಮಾರ್ಗ ಅನಿವಾರ್ಯವಾಗಿದೆ. ಮನೆ ಮನೆಯಿಂದ ರೈತರು ಹೋರಾಟಕ್ಕೆ ಬರಬೇಕು. ಆಗ ಮಾತ್ರ ಸಂಕಷ್ಟದಿಂದ ಮುಕ್ತವಾಗಲು ಸಾಧ್ಯ ಎಂದರು.


    ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನಿಗದಿತ ಸಮಯದಲ್ಲಿ ಮಳೆ ಬೀಳುತ್ತಿಲ್ಲ. ರೈತರು ಪಂಪ್‌ಸೆಟ್‌ಗಳ ಮೂಲಕ ಕಾಫಿ ಹೂ ಅರಳಿಸಬೇಕಾಗಿದೆ. ಬೆಳೆಗಾರರ 10ಎಚ್.ಪಿ. ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡಬೇಕೆಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಸರ್ಕಾರ ಸ್ಪಂದಿಸದೆ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ದ್ರೋಹ ಮಾಡುವ ಸರ್ಕಾರಗಳು ಉಳಿಯುವುದಿಲ್ಲ ಎಂದು ಹೇಳಿದರು.


    ಜಿಲ್ಲಾ ಘಟಕದ ಕಾರ್ಯದರ್ಶಿ ಸುಜಯ್ ಬೋಪಯ್ಯ, ಪದಾಧಿಕಾರಿಗಳಾದ ಸುಭಾಷ್, ಭುವಿಕುಮಾರ್, ಲಕ್ಷ್ಮಣ್, ಅಜ್ಜಮಾಡ ಚಂಗಪ್ಪ, ಟಿ.ಕೆ. ರಾಜು, ಚಂದ್ರಶೇಖರ್, ಮಂದಣ್ಣ, ಹೂವಯ್ಯ, ರಾಜೇಶ್, ರಾಜಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts