More

    ಶ್ರೀಶೈಲಕ್ಕೆ ಹೋಗುವ ಭಕ್ತರು ಮುಂಜಾಗ್ರತೆ ವಹಿಸಲಿ : ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ವಿಜಯಪುರ : ಪ್ರತಿ ವರ್ಷದಂತೆ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿದೆ. ಕರೊನಾ ಹಿನ್ನೆಲೆ ಭಕ್ತರು ಮುಂಜಾಗ್ರತೆ ವಹಿಸಬೇಕೆಂದು ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಎಪಿಎಂಸಿ ಆವರಣದಲ್ಲಿರುವ ಶ್ರೀ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀಶೈಲ ಪಾದಯಾತ್ರಿಗಳ ಮತ್ತು ಸಾರ್ವಜನಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಮನ್ವಯ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಯಾವುದೇ ರೀತಿಯ ಅಪಪ್ರಚಾರದ ಬಗ್ಗೆ ಕಿವಿಗೊಡದೆ ಸುರಕ್ಷಿತ, ಗೌರವ ನಡೆ ಮೂಲಕ ದೇವರ ದರ್ಶನ ಪಡೆಯಬೇಕು. ನಿಗದಿತ ಕೋವಿಡ್-19 ತಪಾಸಣೆಗೆ ಸಂಬಂಧಪಟ್ಟ ಎಲ್ಲ ಪ್ರಮಾಣ ಪತ್ರಗಳನ್ನು ತಗೆದುಕೊಂಡು ಹೋಗಬೇಕು. ಭಕ್ತಿಭಾವದಿಂದ ಅವಶ್ಯಕ ಮುನ್ನೆಚ್ಚರಿಕೆಗಳೊಂದಿಗೆ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
    ರಾಜ್ಯದಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮಾಡುತ್ತಾರೆ. ಅಂದಾಜು 20 ದಿನಗಳವರೆಗೆ ಪಾದಯಾತ್ರೆ ಮಾಡಿ ಶ್ರೀಶೈಲ ತಲುಪಿ ಯುಗಾದಿ ಪುಣ್ಯದಿನದಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆಯಲಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಯುಗಾದಿ ದಿನದಂದು ನಡೆಯುವ ಶ್ರೀಶೈಲ ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲು ದೇವಸ್ಥಾನ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಕರೊನಾ ಸಂದರ್ಭ ನಿರ್ಬಂಧಿಸಲಾದ ಸ್ಪರ್ಶ ದರ್ಶನವನ್ನು ಈ ವರ್ಷವೂ ಮಾಡಲಿಕ್ಕೆ ಅವಕಾಶ ಇಲ್ಲ ಹಾಗೂ ಪಾತಾಳ ಗಂಗೆಯಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ ಎಂದು ತಿಳಿಸಿದರು.
    ಶ್ರೀಶೈಲ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ರಾಮರಾವ್ ಮಾತನಾಡಿ, ಕರೊನಾ ಹಿನ್ನೆಲೆ ಶ್ರೀಶೈಲ ದೇವಸ್ಥಾನದ ದರ್ಶನ ಪಡೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಭಕ್ತಾದಿಗಳು, ಪಾದಯಾತ್ರಿಗಳು ತಪ್ಪದೆ ಮಾಸ್ಕ್ ಧರಿಸಿಕೊಂಡು ದರ್ಶನ ಪಡೆಯಬೇಕು. ಪರಸ್ಪರ ಅಂತರ ಕಾಪಾಡಬೇಕು ಎಂದರಲ್ಲದೆ, 60 ವರ್ಷ ಮೇಲ್ಪಟ್ಟ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಯಾತ್ರೆಯಿಂದ ದೂರ ಉಳಿಯುವುದು ಸೂಕ್ತ ಎಂದು ತಿಳಿಸಿದರು.
    ಕರಿಬಂಟನಾಳದ ಶಿವಕುಮಾರ ಸ್ವಾಮೀಜಿ, ಜಿಲ್ಲಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ರೇಣುಕಾಚಾರ್ಯ ಜೈನಾಪುರ, ರಮೇಶ ಬಿದನೂರ, ಸತೀಶ ಗಾಯಕವಾಡ, ನಿಲೇಶ ಶಹಾ, ಶರಣು ಸಬರದ ಮತ್ತಿತರರಿದ್ದರು.
    ಸಂಜೆ ವೇಳೆ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಶ್ರೀ ಭ್ರಮರಾಂಬಿಕಾ ಹಾಗೂ ಮಲ್ಲಿಕಾರ್ಜುನ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಿತು. ಭಕ್ತರು ಪಾಲ್ಗೊಂಡಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts