More

    ಶ್ರೀಕ್ಷೇತ್ರ ಯಲ್ಲಮ್ಮಗುಡ್ಡದಲ್ಲಿ ಜಾತ್ರೆ ಸಂಭ್ರಮ

    ಉಗರಗೋಳ: ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಾನುವಾರ ಶ್ರದ್ಧಾ-ಭಕ್ತಿಯಿಂದ ಭಾರತ ಹುಣ್ಣಿಮೆ ಜಾತ್ರೆ ಆಚರಿಸಲಾಯಿತು. ಭಾರತ ಹುಣ್ಣಿಮೆ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರ ದಂಡೇ ಹರಿದುಬಂದಿತ್ತು. ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು.

    ಉಗರಗೋಳ-ಯಲ್ಲಮ್ಮನಗುಡ್ಡ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಹೈರಾಣಾದರು. ಕೆಲವರು ಸಾಹಸವೆಂಬಂತೆ ಗುಡ್ಡವೇರಿ ವಾಹನ ಚಲಾಯಿಸಿದರು. ಬೆಳಗ್ಗೆಯಿಂದ ಸಂಜೆವರೆಗೂ ಟ್ರಾಫಿಕ್ ಜಂಜಾಟ ಮುಂದುವರಿದಿದ್ದರಿಂದ ವಾಹನ ಚಾಲಕರ ಪಡಿಪಾಟಿಲು ಹೇಳತೀರದಂತಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಯಲ್ಲಮ್ಮ ದೇವಿ ಸಾನ್ನಿಧ್ಯಕ್ಕೆ ಬಂದಿದ್ದ ಭಕ್ತರು, ಯಲ್ಲಮ್ಮನಗುಡ್ಡದ ಪರಿಸರದಲ್ಲಿ ಬಿಡಾರ ಹೂಡಿದ್ದರು. ಹಲವರು ಶನಿವಾರ ರಾತ್ರಿ ಉಗರಗೋಳದ ಯುವಕ ಮಂಡಳ ಆವರಣ, ವಿವಿಧ ಅಂಗಡಿಮುಂಗಟ್ಟುಗಳ ಮುಂದೆಯೇ ವಸತಿ ಹೂಡಿದ್ದರು.

    ದೇವಿ ನಾಮ ಸ್ಮರಣೆ: ವಿವಿಧೆಡೆಯಿಂದ ಬಂದ ಜೋಗತಿಯರು ತಲೆಮೇಲೆ ಜಗ ಹೊತ್ತು, ಯಲ್ಲಮ್ಮನ ಚರಿತ್ರೆ ಸಾರುವ ಗೀತೆಗಳಿಗೆ ಹೆಜ್ಜೆ ಹಾಕಿದರು. ಕೆಲವರು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

    ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ: ಕರೊನಾ ಸಂಕಷ್ಟದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಬಳೆ, ಕುಂಕುಮ-ಭಂಡಾರ, ತೆಂಗಿನಕಾಯಿ, ಕರ್ಪೂರ, ಹಣ್ಣಿನ ವ್ಯಾಪಾರಸ್ಥರ ಮೊಗದಲ್ಲಿ ಈ ಜಾತ್ರೆ ಮಂದಹಾಸ ಮೂಡಿಸಿತು. ಮಹಾಶಿವರಾತ್ರಿಯವರೆಗೆ ಜಾತ್ರೆ ನಡೆಯಲಿದ್ದು, ಈ ಅವಧಿಯಲ್ಲಿ ಕೋಟ್ಯಂತರ ಭಕ್ತರು ದೇವಿ ದರ್ಶನ ಪಡೆಯಲಿದ್ದಾರೆ. ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts