More

    ಶೋಕ ಸಾಗರದಲ್ಲಿ ದೊಡ್ಡಬಳ್ಳಾಪುರ, ರಾಜ್‌ಕಮಲ್ ಚಿತ್ರಮಂದಿರದ ಮಾಲೀಕ ಕೆಸಿಎನ್ ರುದ್ರೇಗೌಡರಿಗೆ ಪುನೀತ್ ಆಪ್ತ

    ರಾಜೇಶ್.ಎಸ್.ಜಿ ಮುಕ್ಕೇನಹಳ್ಳಿ
    ರಾಜ್ ಕುಟುಂಬಕ್ಕೆ ನಿಕಟ ಸಂಬಂಧ ಹೊಂದಿದ್ದ ದೊಡ್ಡಬಳ್ಳಾಪುರದ ಜನತೆ ಡಾ.ರಾಜ್‌ಕುಮಾರ್ ನಿಧನ ನಂತರ ಪುನೀತ್‌ರಾಜ್ ಕುಮಾರ್ ಅವರನ್ನು ಡಾ.ರಾಜ್‌ರಂತೆಯೇ ನೋಡುತ್ತಿದ್ದರು. ಆದರೆ ಪುನೀತ್‌ರಾಜ್‌ಕುಮಾರ್ ನಿಧನದಿಂದ ದೊಡ್ಡಬಳ್ಳಾಪುರ ಶೋಕ ಸಾಗರದಲ್ಲಿ ಮುಳುಗಿದೆ.

    ರಾಜ್‌ಕಮಲ್ ಚಿತ್ರಮಂದಿರದ ಮಾಲೀಕ ಕೆಸಿಎನ್ ರುದ್ರೇಗೌಡ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಪುನೀತ್, ಪಟ್ಟಣಕ್ಕೆ ಆಗಾಗ ಭೇಟಿ ನೀಡುತ್ತಿದ್ದರು.

    ಪವರ್ ಸ್ಟಾರ್ ಬಿರುದು: 2002ರಲ್ಲಿ ತೆರೆಕಂಡ ಅಪ್ಪು ಚಿತ್ರ ರಾಜ್‌ಕಮಲ್ ಚಿತ್ರ ಮಂದಿರದಲ್ಲಿ 50 ದಿನ ಪೂರೈಸಿದ ಸಂಭ್ರಮಾಚರಣೆಗೆ ಆಗಮಿಸಿದ್ದ ಪುನೀತ್‌ರಾಜ್ ಕುಮಾರ್ ಅವರಿಗೆ ಪವರ್‌ಸ್ಟಾರ್ ಮತ್ತು ನಾಟ್ಯ ಕಿಶೋರ ಬಿರುದು ನೀಡಿ ಸನ್ಮಾನಿಸಲಾಗಿತ್ತು.

    ದೊಡ್ಡಬಳ್ಳಾಪುರಕ್ಕೆ ಕೊನೇ ಭೇಟಿ: ಮಂಗಳವಾರವಷ್ಟೆ (ಅ.26) ಶ್ರೀ ಸುಬ್ರಮಣ್ಯ ಘಾಟಿ ಕ್ಷೇತ್ರಕ್ಕೆ ಖಾಸಗಿಯಾಗಿ ಬಂದು ಪುನೀತ್‌ರಾಜ್‌ಕುಮಾರ್ ಪೂಜೆ ಸಲ್ಲಿಸಿ ಹೋಗಿದ್ದರು. ಈ ಸಂದರ್ಭದಲ್ಲಿ ಪುನೀತ್ ಅವರೇ ಸ್ವತಃ ದೊಡ್ಡಬಳ್ಳಾಪುರದ ಬಹುತೇಕ ಅಭಿಮಾನಿಗಳಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ಕೆಲವರ ಒತ್ತಾಯದ ಮೇರೆಗೆ ನಗರಕ್ಕೂ ಭೇಟಿ ನೀಡಿದ್ದರು. ಪುನೀತ್ ಅವರ ಕೊನೆಯ ಭೇಟಿಯನ್ನು ನೆನೆದು ಅಭಿಮಾನಿಗಳು ಕಣ್ಣೀರಾದರು.

    ದೊಡ್ಡಬಳ್ಳಾಪುರದ ನಂಟು; ಡಾ.ರಾಜ್‌ಕುಮಾರ್ ದೊಡ್ಡಬಳ್ಳಾಪುರಕ್ಕೆ ದಶಕಗಳ ಹಿಂದಿನ ನಂಟು ಹೊಂದಿದ್ದವರು. ಸಿನಿಮಾ ಪ್ರವೇಶಕ್ಕೂ ಮುನ್ನ ಅನೇಕ ನಾಟಕ ಪ್ರದರ್ಶನವನ್ನು ಡಾ.ರಾಜ್ ನೀಡಿದ್ದರು. ಅಲ್ಲದೆ ಬಂಗಾರದ ಮನುಷ್ಯ, ಹುಲಿ ಹಾಲಿನ ಮೇವು ಚಿತ್ರಗಳನ್ನು ದೊಡ್ಡಬಳ್ಳಾಪುರದ ಕೆಸಿಎನ್ ರುದ್ರೇಗೌಡರ ಬ್ಯಾನರಿನಲ್ಲಿ ನಿರ್ಮಿಸಲಾಗಿತ್ತು. ಈ ಮೂಲಕ ದೊಡ್ಡಬಳ್ಳಾಪುರಕ್ಕೂ ರಾಜ್ ಕುಟುಂಬಕ್ಕೂ ಬಿಡಿಸಲಾಗದ ನಂಟು ಇದೆ. ಡಾ.ರಾಜ್ ನಿಧನ ನಂತರವೂ ಅವರ ಕುಟುಂಬಕ್ಕೆ ಬಹು ದೊಡ್ಡ ಅಭಿಮಾನಿಗಳ ದಂಡು ಇಂದಿಗೂ ಇಲ್ಲಿದೆ. ಇಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸುಮಾರು ದಶಕಗಳಿಂದ ಕನ್ನಡಪರ ಹೋರಾಟಗಳನ್ನು ನಡೆಸುತ್ತಾ ಬಂದಿತ್ತು. ನಂತರದ ದಿನದಲ್ಲಿ ಶಿವರಾಜ್‌ಕುಮಾರ್ ಸಂಘ, ಪುನೀತ್‌ರಾಜ್ ಕುಮಾರ್ ಸಂಘಗಳೂ ಕೂಡ ಸ್ಥಾಪನೆಯಾಗುವ ಮೂಲಕ ಡಾ.ರಾಜ್ ಅಭಿಮಾನಿಗಳ ಸಂಘಗಳ ಅವಿಭಾಜ್ಯ ಅಂಗಗಳಾಗಿ ಕಾರ‌್ಯ ನಿರ್ವಹಿಸುತ್ತಿವೆ.

    ನಾವು ಪುನೀತ್‌ರಾಜ್ ಕುಮಾರ್ ಅವರಿಗೆ ಅಷ್ಟೆ ಅಲ್ಲದೆ ಡಾ.ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳಾಗಿದ್ದೇವೆ. ಇತ್ತೀಚೆಗೆ ಘಾಟಿ ಕ್ಷೇತ್ರಕ್ಕೆ ಬಂದಿದ್ದಾಗ ದೂರವಾಣಿ ಮೂಲಕ ಮಾತನಾಡಿದ್ದರು. ಅವರ ಅಕಾಲಿಕ ಮರಣ ಸಹಿಸಲಾಗುತ್ತಿಲ್ಲ.
    ಡಿ.ಸಿ.ಚೌಡರಾಜ್, ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ

    ಕನ್ನಡದ ಮನೆ ಪ್ರತಿಭೆ, ದೊಡ್ಡಮನೆ ಕುಟುಂಬದ ಕುಡಿ, ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದ, ಕರ್ನಾಟಕದ ಎಲ್ಲ ಧರ್ಮ, ಸಮುದಾಯ ವರ್ಗಗಳ ಪ್ರೀತಿ ಸಂಪಾದಿಸಿದ್ದ ಪುನೀತ್ ಅವರ ಅಕಾಲಿಕ ಮರಣ ತುಂಬಲಾರದ ನಷ್ಟ. ಚಿತ್ರರಂಗಕ್ಕೆ ಆದ ದೊಡ್ಡ ನಷ್ಟ.
    ಸು.ನರಸಿಂಹಮೂರ್ತಿ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts