More

    ಶೈಕ್ಷಣಿಕ ಫಲಿತಾಂಶದಲ್ಲಿ ಮೊದಲಾಗಲಿ ಜಿಲ್ಲೆ -ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ -ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

    ದಾವಣಗೆರೆ: ಶೈಕ್ಷಣಿಕ ಫಲಿತಾಂಶದಲ್ಲಿ ಪ್ರತಿ ಬಾರಿ ಉಡುಪಿ, ಮಂಗಳೂರು ಹೆಸರು ಮಾತ್ರ ಕೇಳಿಬರುತ್ತದೆ. ದಾವಣಗೆರೆ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
    ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶಿಕ್ಷಣ ಕ್ಷೇತ್ರದ ರ‌್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ ಬಹಳಷ್ಟು ಕುಸಿದಿದೆ. ಜಿಲ್ಲೆಯನ್ನು ಮುಂಚೂಣಿಗೆ ತರುವ ಜವಾಬ್ದಾರಿ ಜತೆಗೆ ಉತ್ತಮ ಬೋಧನೆ ಮೂಲಕ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು. ಒಳ್ಳೆಯ ವಿದ್ಯಾರ್ಥಿಗಳ ತಯಾರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
    ಜಿಲ್ಲೆಯಲ್ಲಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಲಾ ಕೊಠಡಿಗಳು ಹಾಗೂ ಸ್ಮಾರ್ಟ್ ಕ್ಲಾಸ್ ರೂಂಗಳು ನಿರ್ಮಾಣ ಆಗುತ್ತಿವೆ. ಹೆಚ್ಚಿನ ಕೆಲಸಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದರೆ ಮಾಡಿಕೊಡಲಾಗುವುದು ಎಂದರು.
    ಶಿಕ್ಷಣ ಇಲಾಖೆ ಭ್ರಷ್ಟಾಚಾರಮುಕ್ತ ಆಗಿರಬೇಕು. ಅವ್ಯವಹಾರಕ್ಕೆ ಆಸ್ಪದ ನೀಡಬಾರದು. ಇಂದು ಎಲ್ಲೆಡೆ ಹಾಳು ಮಾಡುವ ಪ್ರವೃತ್ತಿ ಹೆಚ್ಚಿದೆ. ಇದು ಆಗಬಾರದು. ಪ್ರಾಮಾಣಿಕ ಸೇವೆ ಮಾಡಬೇಕು ಎಂದರು.
    ಶಿಕ್ಷಕರ ಬೇಡಿಕೆಗಳಿಗೆ ಸಂಬಂಧ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಭೇಟಿಮಾಡಿ ಒಂದು ಸಭೆಯನ್ನೇ ಆಯೋಜಿಸಿ ಕೂಲಂಕಷ ಚರ್ಚೆ ನಡೆಸೋಣ. ಈ ವಿಚಾರದಲ್ಲಿ ಜತೆಗಿರುವುದಾಗಿ ಭರವಸೆ ನೀಡಿದರು.
    ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಗ್ರಾಮಾಂತರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಇಲ್ಲಿ ದಾಖಲಾತಿ ಹೆಚ್ಚಿಸಿ ಗುಣಾತ್ಮಕ ಶಿಕ್ಷಣ ಕಲ್ಪಿಸುವ ಮೂಲಕ ಖಾಸಗಿ ಶಾಲೆಗಳನ್ನು ಮೆಟ್ಟಿ ನಿಲ್ಲುವಂತೆ ಶಿಕ್ಷಕರು ಶ್ರಮಿಸಬೇಕು ಎಂದರು.
    ಬಾಹ್ಯಾಕಾಶದಲ್ಲಿ ವಿಜ್ಞಾನಿಗಳ ಚಂದ್ರಯಾನ ಸಾಧನೆಗೆ ಶಿಕ್ಷಕರೇ ಪ್ರಮುಖ ಕಾರಣ. ಪ್ರಶಸ್ತಿಗಳು ಹುಡುಕಿಕೊಂಡು ಬರಬೇಕೇ ಹೊರತು ಶಿಫಾರಸು-ಹಣಕ್ಕೆ ಮೀಸಲಾಗಬಾರದು ಎಂದು ತಿಳಿಸಿದರು.
    ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ಭಾರತ ದೇಶವು ಎಲ್ಲ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಕೈಗೊಂಡಿದೆ. ಚಂದ್ರನ ಮೇಲೆ ಹೆಜ್ಜೆ ಗುರುತು ಮೂಡಿಸಿ ಸೂರ್ಯನತ್ತ ಹೊರಟಿದ್ದೇವೆ. ಉತ್ತಮ ವಿಜ್ಞಾನಿ, ಕ್ರಿಯಾಶೀಲ ಮನಸ್ಸುಗಳನ್ನು ಸಜ್ಜುಗೊಳಿಸುವ ಶಕ್ತಿ ದೇಶಕ್ಕಿದೆ ಎಂದರು.
    ಶೈಕ್ಷಣಿಕ ಸಲಹೆಗಾರ ಜಗನ್ನಾಥ್ ನಾಡಿಗೇರ್ ಉಪನ್ಯಾಸ ನೀಡಿದರು. ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಡಯಟ್ ಸಂಸ್ಥೆ ಉಪನಿರ್ದೇಶಕಿ ಎಸ್. ಗೀತಾ, ದಾವಣಗೆರೆ ಉತ್ತರ ವಲಯ ಪ್ರಭಾರ ಬಿಇಒ ಕೆ.ಎ. ಪಸೀಹ್ ಉದ್ದೀನ್ ಶಾಕೀರ್, ದಕ್ಷಿಣ ವಲಯ ಬಿಇಒ ಪುಷ್ಪಲತಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನ್‌ಪುರ, ಪಾಲಿಕೆ ಸದಸ್ಯೆ ಗೀತಾ ದಿಳ್ಳೆಪ್ಪ ಇತರರಿದ್ದರು. ಡಿಡಿಪಿಐ ಜಿ. ಕೊಟ್ರೇಶ್ ಪ್ರಾಸ್ತಾವಿಕ ಮಾತನಾಡಿದರು.
    ಪ್ರಾಥಮಿಕ, ಪ್ರೌಢಶಾಲೆ ವಿಭಾಗ ಸೇರಿ 18 ಜನರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts