More

    ಶುಂಠಿ ಬೆಳೆಗೆ ಕೊಳೆ ರೋಗ

    ಶಿರಸಿ: ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರು ಗದ್ದೆಗಳಿಗೆ ಭೇಟಿ ನೀಡಿ ರೋಗ ನಿವಾರಣೆ ಕುರಿತು ರೈತರಿಗೆ ಸಲಹೆ ನೀಡಿದರು.

    ತಾಲೂಕಿನ ದಾಸನಕೊಪ್ಪ, ಬೆಳ್ಳನಕೇರಿ, ಕುಪ್ಪಗಡ್ಡೆ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ತಜ್ಞ ವಿ.ಎಂ.ಹೆಗಡೆ, ‘ಪ್ರಸಕ್ತ ವರ್ಷ ಸುರಿದ ಹೆಚ್ಚಿನ ಮಳೆಯಿಂದಾಗಿ ಶುಂಠಿ ಬೆಳೆಗೆ ಶಿಲೀಂಧ್ರಜನ್ಯ ಮೃದು ಗಡ್ಡೆ ಕೊಳೆ ರೋಗದ ಬಾಧೆ ಹೆಚ್ಚಾಗಿದೆ. ಇದರ ಹೊರತಾಗಿ ಬ್ಯಾಕ್ಟೀರಿಯಾದಿಂದ ಬರುವ ಗಡ್ಡೆ ಕೊಳೆ ಅಥವಾ ಹಸಿರು ಕೊಳೆ ಕೆಲವು ಕಡೆ ಕಂಡು ಬಂದಿದೆ. ಬಿಸಿಲು ಮತ್ತು ಮಳೆಯ ವಾತಾವರಣ ಈ ಹಸಿರು ಕೊಳೆ ರೋಗವು ಉಲ್ಬಣವಾಗಲು ಕಾರಣವಾಗಿದೆ. ಹಾಗಾಗಿ ಶುಂಠಿಯ ಮೃದು ಗಡ್ಡೆ ಕೊಳೆ ನಿಯಂತ್ರಣಕ್ಕಾಗಿ ಕಾಪರ್ ಆಕ್ಸಿಕ್ಲೋರೈಡ್ ಶಿಲೀಂಧ್ರ ನಾಶಕವನ್ನು 3 ಗ್ರಾಂನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭವಾಗಿದ್ದಲ್ಲಿ ಮೆಟಾಲಾಕ್ಸಿಲ್ ಅಥವಾ ಸೈಮಾಕ್ಷಿನಿಲ್ ಎಂ.ಜೆಡ್. 2ಗ್ರಾಂ ಅಥವಾ ಮೆಟಾಲಾಕ್ಸಿಲ್ 35 ಡಬ್ಲ್ಯುಎಸ್ 1ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಹಾಕಬೇಕು. ರಾಲಸ್ಟೋನಿಯಾ ಸೊಲನೇಸಿಯಾರಮ್ ಬ್ಯಾಕ್ಟೀರಿಯಾದಿಂದ ಬರುವ ಕೊಳೆ ರೋಗಕ್ಕೆ ತುತ್ತಾದ ಗಿಡದ ಎಲೆಗಳು ಹಸಿರಿರುವಾಗಲೇ ಸುರುಳಿ ಸುತ್ತಿಕೊಂಡು ಬಾಡುತ್ತವೆ. ನಂತರ ಕೆಳಗಿನಿಂದ ಎಲೆಗಳು ಹಳದಿಯಾಗುತ್ತ 4-5 ದಿನಗಳಲ್ಲೇ ಬಾಡಿ ಸಾಯುತ್ತವೆ. ಈ ರೋಗ ತಗುಲಿದ ಗಿಡಗಳು ಕೆಲವೇ ದಿನಗಳಲ್ಲಿ ಸಾಯುವುದರಿಂದ ಒಮ್ಮೆ ರೋಗ ತಗುಲಿದ ಗಿಡಗಳನ್ನು ಬದುಕಿಸುವುದು ಕಷ್ಟ. ಆದ್ದರಿಂದ ಶುಂಠಿಯ ಹಸಿರು ಕೊಳೆಯನ್ನು ನಿಯಂತ್ರಿಸಲು ರೈತರು ತಕ್ಷಣ ಸ್ಟ್ರೆಪ್ರೋಸೈಕ್ಲಿನ್ 0.5 ಗ್ರಾಂ ಮತ್ತು ಕಾಪರ್ ಆಕ್ಸಿ ಕ್ಲೋರೈಡ್ 3ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಗಿಡದ ಬುಡ ನೆನೆಯುವಂತೆ ಸಿಂಪಡಿಸಬೇಕು. ನಂತರ 200 ಗ್ರಾಂ ಬ್ಲೀಚಿಂಗ್ ಪೌಡರ್ ಅನ್ನು 100 ಲೀಟರ್ ನೀರಿಗೆ ಸೇರಿಸಿದ ದ್ರಾವಣದಿಂದ ಮಡಿಗಳನ್ನು ನೆನೆಸಬೇಕು. ತೋಟದಲ್ಲಿ ರೋಗ ಪೀಡಿತ ಗಿಡಗಳನ್ನು ಕಿತ್ತು ಆ ಜಾಗಕ್ಕೆ ಸುಣ್ಣವನ್ನು ಹಾಕಬೇಕು ಮತ್ತು ಆ ಜಾಗದ ನೀರು ಉಳಿದ ಪ್ರದೇಶಕ್ಕೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

    ಸಹಾಯಕ ತೋಟಗಾರಿಕೆ ನಿದೇರ್ಶಕ ಗಣೇಶ ಹೆಗಡೆ, ಸಹಾಯಕ ತೋಟಗಾರಿಕೆ ಅಧಿಕಾರಿ ಗಜಾನನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts