More

    ಶುಂಠಿ ಕಿತ್ತರೆ ನಷ್ಟ, ಹಾಗೇ ಬಿಟ್ಟರೆ ನಾಶ!

    ಮೂಡಿಗೆರೆ: ತಾಲೂಕಿನ ಶುಂಠಿ ಬೆಳೆಗಾರರು ಕೈಸುಟ್ಟುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಕರೊನಾ ವೈರಸ್​ನಿಂದ ಶುಂಠಿಗೆ ಬೇಡಿಕೆ ಇಲ್ಲದೆ ಬೆಲೆ ಕುಸಿದಿದೆ. ಶುಂಠಿ ಕೀಳದೆ ಹಾಗೇ ಬಿಟ್ಟರೆ ಮಳೆಗಾಲದಲ್ಲಿ ಹಾಳಾಗುವ ಭೀತಿ ಕಾಡುತ್ತಿದೆ. ತಾಲೂಕಿನ ಬಹುತೇಕ ಭತ್ತದ ಗದ್ದೆ, ಮೈದಾನ, ನೀರಾವರಿ ಜಮೀನಲ್ಲಿ ಶುಂಠಿ ಬೆಳೆಯಲಾಗಿದೆ. ಕಳೆದ ವರ್ಷ ಸುಮಾರು 1,500 ಹೆಕ್ಟೇರ್ ಪ್ರದೇಶದಲ್ಲಿ ರೈತರು ಶುಂಠಿ ಬೆಳೆದಿದ್ದರು. ಬೀಜದ ಶುಂಠಿ 60 ಕೇಜಿ ಚೀಲಕ್ಕೆ 4 ಸಾವಿರ ರೂ. ಇತ್ತು.

    ಪ್ರತಿ ವರ್ಷ ಶುಂಠಿ ಬೆಳೆ ಕೀಳುವ ಸಮಯದಲ್ಲಿ ವ್ಯಾಪಾರಿಗಳು ಜಮೀನಿಗೆ ಬಂದು ಖರೀದಿಸುತ್ತಿದ್ದರು. ಈ ಬಾರಿ ಹೊರ ರಾಜ್ಯಕ್ಕೆ ಶುಂಠಿ ಲೋಡ್ ಕಳಿಸಲು ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ಶುಭ ಸಮಾರಂಭಗಳು ರದ್ದುಗೊಂಡಿವೆ. ಹೋಟೆಲ್​ಗಳಲ್ಲಿ ವ್ಯಾಪಾರವಿಲ್ಲ. ಈಗ 60 ಕೆಜಿ ಚೀಲಕ್ಕೆ 1,500 ರೂ. ಇದ್ದರೂ ವ್ಯಾಪಾರಿಗಳು ಶುಂಠಿ ಖರೀದಿಗೆ ಬರುತ್ತಿಲ್ಲ. ಪ್ರತಿ ವರ್ಷ ಕೇರಳ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ ಮೊದಲಾದ ರಾಜ್ಯಗಳಿಗೆ ಶುಂಠಿ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಲಾಕ್​ಡೌನ್​ನಿಂದ ಯಾವ ರಾಜ್ಯದಲ್ಲೂ ಶುಂಠಿ ಬೇಡಿಕೆ ಇಲ್ಲದಂತಾಗಿದೆ.

    ಒಂದು ಎಕರೆ ಪ್ರದೇಶದಲ್ಲಿ 20 ಚೀಲ ಶುಂಠಿ ಬಿತ್ತನೆ ಮಾಡಿ ಕೆಲಸ, ಜಮೀನು, ಬಾಡಿಗೆ ಸೇರಿ 2 ಲಕ್ಷ ರೂ. ಖರ್ಚು ಬರುತ್ತದೆ. ಕಳೆದ ವರ್ಷ ಮಹಾಮಳೆಗೆ ಸಿಲುಕಿ 500 ಹೆಕ್ಟೇರ್ ಶುಂಠಿ ಬೆಳೆ ಸಂಪೂರ್ಣ ನಾಶವಾಗಿತ್ತು. ಕಾಡಾನೆ, ಕಾಡೆಮ್ಮೆ ಇನ್ನಿತರ ಕಾಡು ಪ್ರಾಣಿಗಳು ತಿರುಗಾಡಿ ಹಾನಿ ಮಾಡಿವೆ. ಉಳಿದ ಬೆಳೆ ಕೀಳಲು ಹೊರಟಾಗ ಲಾಕ್​ಡೌನ್​ನಿಂದಾಗಿ ಖರೀದಿದಾರರೇ ಇರಲಿಲ್ಲ.

    ಒಂದು ಎಕರೆಯಲ್ಲಿ 200 ಚೀಲ ಶುಂಠಿ ಬೆಳೆಯಬೇಕು. ಈಗ ಹವಾಮಾನ ವೈಪರೀತ್ಯದಿಂದ ಎಕರೆಗೆ 100 ಚೀಲ ಇಳುವರಿ ಬರುತ್ತಿದೆಯಷ್ಟೆ. ಖರೀದಿಗೆ ವ್ಯಾಪಾರಿಗಳು ಇಲ್ಲವಾದ್ದರಿಂದ ಶುಂಠಿ ಫಸಲು ಕೀಳಬೇಕೇ? ಬೇಡವೇ? ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts