More

    ಶಿಷ್ಯ ಸಮೂಹದ ಗುರುಭಕ್ತಿಗೆ ಶಿಕ್ಷಕರು ಭಾವುಕ: ಸರ್‌ಎಂವಿ ಕಾಲೇಜಿನಲ್ಲಿ ಗುರುವಂದನೆ ಸಂಭ್ರಮ

    ಭದ್ರಾವತಿ: ಮೂವತ್ತು ವರ್ಷಗಳ ಹಿಂದೆ ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಪದವಿ ಪಡೆದು ನಂತರ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದು ನ್ಯೂಟೌನ್‌ನ ಸರ್‌ಎಂವಿ ಸರ್ಕಾರಿ ಕಲಾ ಹಾಗೂ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಯದೇವಪ್ಪ ಹೇಳಿದರು.
    ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಭಾನುವಾರ 1989-94ನೇ ಬ್ಯಾಚ್‌ನ ಪಿಯುಸಿ, ಬಿಕಾಂ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗೌರವ ಸಲ್ಲಿಸುವ ಸಲುವಾಗಿ ಎಲ್ಲ ಶಿಕ್ಷಕರನ್ನು ಒಂದುಗೂಡಿಸಿರುವುದು ನಿಮಗಷ್ಟೇ ಅಲ್ಲ ನಮಗೂ ಖುಷಿ ತಂದಿದೆ. ನಿಮ್ಮಂತಹ ಶಿಷ್ಯರೊಡಗೂಡಿ ಸಹೋದ್ಯೋಗಿಗಳು, ಸಿಬ್ಬಂದಿ ವರ್ಗವನ್ನು ಮತ್ತೊಮ್ಮೆ ನೋಡುವ ಅವಕಾಶ ಸಿಕ್ಕಂತಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇದೇ ರೀತಿ ನಿರಂತರವಾಗಿರಲಿ. ದೇವರು ನಿಮಗೆ ಆರೋಗ್ಯ ಆಯಸ್ಸು ನೀಡಲಿ ಎಂದರು.
    ಕಾಲೇಜು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿದೆ. ಅನ್ನ ಹಾಕಿದ ಕಾಲೇಜು ಹಾಗೂ ಇಲ್ಲಿ ಕಲಿತ ವಿದ್ಯಾರ್ಥಿಗಳನ್ನು ನಾನು ಜೀವಂತ ಇರುವವರೆಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ನೀವುಗಳು ಈಗಾಗಲೇ ಮಕ್ಕಳು, ಮೊಮ್ಮಕ್ಕಳನ್ನು ಕಂಡಿದ್ದೀರಿ. ಇಷ್ಟು ವಯಸ್ಸಾದರೂ ಶಿಕ್ಷಣ ಹೇಳಿಕೊಟ್ಟ ಗುರುಗಳನ್ನು ಗೌರವದಿಂದ ಕಾಣುತ್ತಿರುವುದು ನಿಜಕ್ಕೂ ತುಂಬ ಸಂತಸವನ್ನುಂಟು ಮಾಡಿದೆ ಎಂದರು.
    ಪ್ರಾಚಾರ್ಯ ಡಾ. ಧನಂಜಯ್ ಮಾತನಾಡಿ, ಆಗಿನ ಶಿಕ್ಷಣ ಪದ್ಧತಿಗೂ, ಈಗಿನ ಶಿಕ್ಷಣದ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗಿನ ಶಿಕ್ಷಣ ಪದ್ಧತಿಯಲ್ಲಿ ಗುರುಗಳ ಅನುಭವವನ್ನು ಶಿಕ್ಷಣದೊಂದಿಗೆ ಧಾರೆ ಎರೆಯಲು ಅವಕಾಶವಿತ್ತು. ಆದರೆ ಪ್ರಸ್ತುತದಲ್ಲಿ ಮೊಬೈಲ್, ಗೂಗಲ್‌ಗಳೇ ಎಲ್ಲವನ್ನೂ ತಿಳಿಸುತ್ತವೆ ಎಂದು ಹೇಳಿದರು.
    1989-94ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಅನುಭವ ಹಾಗೂ ಮಾಡುತ್ತಿರುವ ವೃತ್ತಿಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ವೃಂದ ಕಾಲೇಜಿಗೆ ಧ್ವನಿವರ್ಧಕ ಹಾಗೂ ಬೆಲ್ ಕೊಡುಗೆಯಾಗಿ ನೀಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts