More

    4.5 ಲಕ್ಷ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಾಟ: ಟಿ.ಡಿ.ಮೇಘರಾಜ್

    ಶಿವಮೊಗ್ಗ: ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ಪ್ರತಿಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಜಿಲ್ಲೆಯಲ್ಲೂ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು 4.5 ಲಕ್ಷ ಮನೆಗಳಲ್ಲಿ ತಿರಂಗಾ ಹಾರಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.
    75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದು ಪ್ರತಿಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಬೇಕಿದೆ. ಆ ಹಿನ್ನೆಲೆಯಲ್ಲಿ ಆ.13ರ ಬೆಳಗ್ಗೆಯಿಂದ 15ರ ಸಂಜೆವರೆಗೂ ನಿರಂತರವಾಗಿ ರಾಷ್ಟ್ರಧ್ವಜ ಮನೆಗಳಲ್ಲಿ ಹಾರಾಡಲಿದೆ. ರಾಷ್ಟ್ರಧ್ವಜವನ್ನು ಹಾರಿಸುವ ನಿಯಮಗಳ ಬಗ್ಗೆಯೂ ಬಿಜೆಪಿಯಿಂದ ಕಾರ್ಯಕರ್ತರ ಮೂಲಕ ಮಾಹಿತಿ ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಎಲ್ಲ ತಾಲೂಕುಗಳಲ್ಲಿ ಗ್ರಾಪಂ ಮಟ್ಟ, ಮಂಡಲಗಳು, ಕೋಟೆ ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿಯೊಂದಿಗೆ ರಾಷ್ಟ್ರಧ್ವಜ ಹಾರಿಸಲು ನಿರ್ಧರಿಸಲಾಗಿದೆ. ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ವಿಶೇಷ ಕಾರ್ಯಕ್ರಮದ ಜತೆಗೆ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲೂ ವಿಶೇಷವಾಗಿ ಸ್ವಾತಂತ್ರ್ಯೋತ್ಸವ ನಡೆಯಲಿದೆ. ಬಿಜೆಪಿ ಯುವಮೋರ್ಚಾದಿಂದ ಬೈಕ್ ರ‌್ಯಾಲಿ ಕೂಡ ನಡೆಸಲಾಗುವುದು ಎಂದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿ ಎಲ್ಲ ಶಾಸಕರು, ಎಂಎಲ್‌ಸಿಗಳು ಮತ್ತು ಮುಖಂಡರು ಪಾಲ್ಗೊಳ್ಳುವರು. ಪ್ರತಿ ಮನೆಗೂ ಧ್ವಜದ ಜತೆಗೆ ಕೋಲು ಮತ್ತು ಇತರ ಸಲಕರಣೆಗಳನ್ನೂ ವಿತರಿಸಲಾಗುವುದು ಎಂದು ಹೇಳಿದರು.
    ತಿರಂಗಾ ವಿತರಣೆ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನ ಟೀಕೆಗಳಿಗೆ ಯಾವ ಪ್ರಾಮುಖ್ಯತೆಯನ್ನೂ ನೀಡುವುದಿಲ್ಲ. ಬದಲಾಗಿ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದರು.
    ಶಾಸಕ ಕೆ.ಎಸ್.ಈಶ್ವರಪ್ಪ, ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಮುಖಂಡರಾದ ಬಿ.ಆ. ಮಧುಸೂದನ್, ಕೆ.ವಿ.ಅಣ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts