More

    ಶಿವಮೊಗ್ಗದಲ್ಲಿ 74 ಅಡಿ ಎತ್ತರ ಶಿವಲಿಂಗ ನಿರ್ಮಾಣ: ಶಾಸಕ ಕೆ.ಎಸ್.ಈಶ್ವರಪ್ಪ ಮಾಹಿತಿ

    ಶಿವಮೊಗ್ಗ: ನಗರದ ರಾಗಿಗುಡ್ಡವನ್ನು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 10 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದ್ದು, ಇಲ್ಲಿ 74 ಅಡಿ ಎತ್ತರದ ಶಿವಲಿಂಗ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
    ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಗಿಗುಡ್ಡದ ಮೇಲ್ಭಾಗದಲ್ಲಿ ಶಿವಲಿಂಗ ನಿರ್ಮಾಣ ಮಾಡಲಾಗುವುದು. ಇದೇ ಶಿವಲಿಂಗದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಯೂ ಇರಲಿದೆ ಎಂದರು.
    ಶಿವಲಿಂಗದ ಸುತ್ತಲೂ ದ್ವಾದಶ ಲಿಂಗಗಳನ್ನು ಪ್ರತಿಷ್ಠಾಪಿಸಲಾಗುವುದು. ಇದಕ್ಕಾಗಿ 2.20 ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಈಗಾಗಲೇ 5 ಕೋಟಿ ರೂ. ಮಂಜೂರಾಗಿದ್ದು, ಉಳಿದ ಹಣ ವಿವಿಧ ಹಂತಗಳಲ್ಲಿ ಬಿಡುಗಡೆಯಾಗಲಿದೆ. ಪ್ರವಾಸೋದ್ಯಮ ಇಲಾಖೆಯೇ ಈ ಯೋಜನೆಯ ಅನುಷ್ಠಾನ ಮಾಡಲಿದೆ ಎಂದು ತಿಳಿಸಿದರು.
    ರಾಗಿಗುಡ್ಡದಲ್ಲಿರುವ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಅಷ್ಟಮಂಗಳ ಪ್ರಶ್ನೆಯ ಮೂಲಕ ಪರಿಹಾರವನ್ನೂ ಕಂಡುಕೊಳ್ಳಲಾಗಿದೆ. ರಾಗಿಗುಡ್ಡದ ಮೇಲ್ಭಾಗಕ್ಕೆ ಸಂಪರ್ಕ ಕಲ್ಪಿಸಲು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
    ಶೀಘ್ರದಲ್ಲೇ ಶಿವಲಿಂಗ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಶಿಲ್ಪಿಯನ್ನು ಪ್ರವಾಸೋದ್ಯಮ ಇಲಾಖೆಯಿಂದಲೇ ಆಯ್ಕೆ ಮಾಡಲಾಗುತ್ತದೆ. ಮುಂದಿನ ವರ್ಷ ಶಿವರಾತ್ರಿ ವೇಳೆಗೆ ಇದು ಲೋಕಾರ್ಪಣೆ ಆಗಬೇಕೆಂಬುದು ಸದ್ಯದ ಆಲೋಚನೆಯಾಗಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
    ತಹಸೀಲ್ದಾರ್ ನಾಗರಾಜ್ ಈ ವೇಳೆ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts