More

    ಶಿಥಿಲಾವಸ್ಥೆಯ ಮನೆಗಳ ಜನ, ಜಾನುವಾರು ಸ್ಥಳಾಂತರಕ್ಕೆ ಸೂಚನೆ

    ಗದಗ: ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿಥಿಲಗೊಂಡ ಮನೆಗಳನ್ನು ಗುರುತಿಸಿ ಅಲ್ಲಿ ವಾಸಿಸುವ ಜನರು, ಜಾನುವಾರುಗಳನ್ನು ಕೂಡಲೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ಎಲ್ಲ ತಹಸೀಲ್ದಾರರು, ತಾಪಂ ಇಒಗಳು, ಕೃಷಿ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಅವರು ಮಾತನಾಡಿದರು.

    ಮಳೆ, ಪ್ರವಾಹದಿಂದ ಮನೆ, ಜಾನುವಾರು ಹಾನಿ, ಬೆಳೆಗಳ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ವಿತರಣೆಗೆ ಕ್ರಮ ಜರುಗಿಸಿ. ಪ್ರತಿ ಗ್ರಾಮಕ್ಕೂ ರುದ್ರಭೂಮಿ ಇರಬೇಕು. ರುದ್ರಭೂಮಿ ಇಲ್ಲದ ಗ್ರಾಮಗಳಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ಜಮೀನುಗಳಿದ್ದರೆ ಮಂಜೂರಾತಿಗೆ ಹಾಗೂ ಪಿಂಚಣಿದಾರರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಪಿಂಚಣಿ ಹಣ ಜಮೆ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದರು.

    ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಿದ ಹೆಸರುಕಾಳು ಖರೀದಿ ಕೇಂದ್ರಗಳಲ್ಲಿನ ಪ್ರಕ್ರಿಯೆಯನ್ನು ತಹಸೀಲ್ದಾರರು ಪರಿಶೀಲಿಸಬೇಕು. ರೈತರಿಗೆ ಕೇಂದ್ರಗಳ ಮಾಹಿತಿ ಒದಗಿಸಿ, ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಬೇಕು. ಪಶ್ಚಿಮ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ವಯ ಚುನಾವಣೆ ಜರುಗಿಸಲು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

    ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ತಹಸೀಲ್ದಾರ್, ತಾಪಂ ಇಒಗಳು, ಆರೋಗ್ಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts