More

    ಶಿಥಿಲಗೊಂಡ ಓವರ್‌ಹೆಡ್ ಟ್ಯಾಂಕ್ ಕುಸಿಯುವ ಭೀತಿ, ಜೀವ ಭಯದಲ್ಲೇ ಬದುಕು ಸಾಗಿಸುತ್ತಿರುವ ಜನತೆ, ದುರಸ್ತಿಗೊಳಿಸಲು ಜನಪ್ರತಿನಿಧಿಗಳ ನಿರಾಸಕ್ತಿ

    ಜಿ.ಕೆ.ಸುಗ್ಗರಾಜು ನೆಲಮಂಗಲ
    ಶ್ರೀನಿವಾಸಪುರ ಗ್ರಾಪಂ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿರುವ ಓವರ್‌ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಆಗಲೋ, ಈಗಲೋ ಬೀಳುವ ಸ್ಥಿತಿಯಲ್ಲಿದೆ. ದುರಸ್ತಿಗೊಳಿಸಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದಾಗಿ ಅಕ್ಕಪಕ್ಕದ ಮನೆಗಳವರು ಜೀವಭಯದಲ್ಲೇ ಬದುಕು ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

    ಜಿಪಂ ತ್ವರಿತ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ನಿರ್ಮಾಣಗೊಂಡಿದ್ದ ಟ್ಯಾಂಕ್ ಅನ್ನು ಅಂದಿನ ಸಚಿವ ಡಾ.ಎಂ.ಶಂಕರ್‌ನಾಯಕ್ ಅವರು 1998ರ ಸೆ.24ರಂದು ಉದ್ಘಾಟಿಸಿದ್ದರು. ಶಿಥಿಲಗೊಂಡಿದೆ ಎಂಬ ಕಾರಣಕ್ಕಾಗಿ ಟ್ಯಾಂಕ್ ಬಳಸುತ್ತಿಲ್ಲ. ಪಿಲ್ಲರ್‌ಗಳಿಗೆ ಹಾಕಲಾಗಿದ್ದ ಕಾಂಕ್ರೀಟ್ ಕಿತ್ತು ಬಂದು, ಕಬ್ಬಿಣದ ಹಂದರ ಕಾಣುತ್ತಿದೆ. ಇದರಿಂದಾಗಿ ಟ್ಯಾಂಕ್ ಬೀಳುವ ಅಪಾಯ ಹೆಚ್ಚಾಗಿದ್ದು, ಇದರ ಸುತ್ತಮುತ್ತಲಿರುವ ಹತ್ತಾರು ಮನೆಗಳ ನಿವಾಸಿಗಳು ಜೀವಭಯದಲ್ಲೇ ಜೀವಿಸುತ್ತಿದ್ದಾರೆ. ಸಾಲದ್ದಕ್ಕೆ ಟ್ಯಾಂಕ್ ಇರುವ ಪ್ರದೇಶದಲ್ಲಿ ಶಾಲೆಯ ಮಕ್ಕಳು ಹಾಗೂ ಗ್ರಾಪಂ ಕಾರ್ಯಾಲಯಕ್ಕೆ ನಿತ್ಯವೂ ನೂರಾರು ಜನರು ಓಡಾಡುತ್ತಾರೆ. ಇವರೂ ಕೂಡ ಜೀವ ಕೈಯಲ್ಲಿ ಹಿಡಿದು ಓಡಾಡುವುದು ಅನಿವಾರ್ಯವಾಗಿದೆ.

    ಗಬ್ಬೆದ್ದು ನಾರುವ ಚರಂಡಿಗಳು: ಗ್ರಾಮದ ಬಹುತೇಕ ಎಲ್ಲ ಚರಂಡಿಗಳಲ್ಲೂ ಕಸ ತುಂಬಿಕೊಂಡಿದ್ದು, ಕೊಳಚೆನೀರು ನಿಂತಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಮೂಡಿದೆ.

    ಗ್ರಾಮದಲ್ಲಿ 180ಕ್ಕೂ ಹೆಚ್ಚು ಕುಟುಂಬಗಳಿವೆ. 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಟ್ಯಾಂಕ್ ದುರಸ್ತಿ ಬಗ್ಗೆ ಕಳೆದೊಂದು ವರ್ಷದಿಂದ ಅಧಿಕಾರಿಗಳ ಗಮನಸೆಳೆಯಲಾಗುತ್ತಿದೆ. ಆದರೆ ಅವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಜನರು ಜೀವ ಭಯದಲ್ಲಿ ಓಡಾಡುವುದು ಅನಿವಾರ್ಯವಾಗಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಇತ್ತ ಗಮನ ಹರಿಸಬೇಕು.
    ಮಂಜುನಾಥ್, ಮುಖಂಡ

    ಗ್ರಾಮಸ್ಥರು 2 ತಿಂಗಳ ಹಿಂದೆ ಓವರ್‌ಹೆಡ್ ಟ್ಯಾಂಕ್ ಹಾಗೂ ಚರಂಡಿ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಗ್ರಾಪಂ ಸಿಬ್ಬಂದಿ ತಕ್ಷಣವೇ ಚರಂಡಿ ಸ್ವಚ್ಛಗೊಳಿಸಿದ್ದಾರೆ. ಕಳೆದೊಂದು ವಾರದಿಂದ ಮಳೆಯಾಗುತ್ತಿರುವುದರಿಂದ, ಚರಂಡಿಗಳು ಮತ್ತೆ ಕಟ್ಟಿಕೊಂಡಿವೆ. ಮತ್ತೊಮ್ಮೆ ಸ್ವಚ್ಛಗೊಳಿಸಲಾಗುವುದು. ಓವರ್‌ಹೆಡ್ ಟ್ಯಾಂಕ್ ತೆರವುಗೊಳಿಸಲು ಅನುಮತಿ ಕೋರಿ ಪಿಆರ್‌ಐಡಿಎಲ್‌ನ ಇಂಜಿನಿಯರ್‌ಗೆ 2 ತಿಂಗಳ ಹಿಂದೆಯೇ ಪತ್ರ ಬರೆಯಲಾಗಿದೆ. ಅನುಮತಿ ಸಿಗುತ್ತಲೇ ಅದನ್ನು ತೆರವುಗೊಳಿಸಲಾಗುವುದು.
    ಎನ್. ಸುಮಿತ್ರಾ, ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts