More

    ಶಿಕ್ಷಣ ವ್ಯವಸ್ಥೆಯ ಕೊರತೆ ನೀಗಲಿ

    ಧಾರವಾಡ: ಬದಲಾವಣೆಯ ಅನಿವಾರ್ಯತೆಯಲ್ಲೂ ಮಾತೃಭಾಷೆ ಉಳಿಸಿಕೊಳ್ಳುವ ಯತ್ನ ನಿರಂತರ ವಾಗಿರಬೇಕು. ಈ ಬಗ್ಗೆ ಪ್ರಾಜ್ಞರು ಎಲ್ಲ ರೀತಿಯ ಪ್ರಯತ್ನ ನಡೆಸಬೇಕು ಎಂಬುದು ನಾನೂ ಸೇರಿದಂತೆ ಹಲವರ ಆಶಯ ಎಂದು ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ, ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಸಮೀಪದ ಇಟ್ಟಿಗಟ್ಟಿ ಗ್ರಾಮದ ಸರ್ಕಾರಿ ಹಿ.ಪ್ರಾ. ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರವಾಡ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

    ಕನ್ನಡ ಭಾಷೆಯು ಮನೆತನದ ಪಾಯ ಆಗಬೇಕು. ಪ್ರಾದೇಶಿಕ (ಮಾತೃ) ಭಾಷೆಯಲ್ಲಿ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ನೀಡುವ ಶಿಕ್ಷಣ ಭದ್ರ ಬುನಾದಿಯಾಗುತ್ತದೆ. ಇದು ಭಾಷೆ ಮೇಲೆ ಪ್ರೀತಿ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸಹಕಾರಿ. ಶಿಕ್ಷಕರ ನೇಮಕಾತಿ ಚುರುಕುಗೊಳಿಸುವ ಜತೆಗೆ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆ ನೀಗಿಸಬೇಕು ಎಂದರು.

    ಧಾರವಾಡ ಶಹರವನ್ನು ಒಂದು ಸಾಹಿತ್ಯ ಘಟಕವನ್ನಾಗಿಸಿ ತಾಲೂಕಿನ ಹಳ್ಳಿಗಳಲ್ಲಿ ಹೆಚ್ಚು ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಕ್ರಮಕೈಗೊಳ್ಳಬೇಕು ಎಂದರು. ಕಲಬುರಗಿ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಡಾ. ಎಚ್.ಎಂ. ಮಹೇಶ್ವರಯ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಪ್ರಜ್ಞೆಯನ್ನು ವಿಶ್ವ ಪ್ರಜ್ಞೆಯನ್ನಾಗಿಸುವ ಕೆಲಸ ಮಾಡಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕ ಬಳಿಕ ಅದಕ್ಕೆ ತಕ್ಕ ಕೆಲಸ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಡೀ ಕನ್ನಡದ ಶಾಸ್ತ್ರೀಯ ಸಾಹಿತ್ಯವನ್ನು ಡಿಜಿಟಲೀಕರಣ ಮೂಲಕ ಪ್ರಕಟಿಸುವ ಕೆಲಸವಾಗಲಿ ಎಂದರು.

    ನಿಕಟಪೂರ್ವ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಕರೊನಾ ಕತ್ತಲೆ ಕಳೆದಿದ್ದು ಮತ್ತೆ ಕನ್ನಡ ತೇರು ಎಳೆಯುವ ಕೆಲಸ ನಡೆಯಬೇಕು ಎಂದರು. ಮಾಜಿ ಶಾಸಕಿ ಸೀಮಾ ಮಸೂತಿ, ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ, ತಾಪಂ ಅಧ್ಯಕ್ಷ ರವಿವರ್ಮ ಪಾಟೀಲ, ಸೀತಾ ಛಪ್ಪರ, ಚನ್ನಬಸಪ್ಪ ನವಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಅಶ್ಪಾಕ್ ಪೀರಜಾದೆ, ಬಸನಗೌಡ ಪಾಟೀಲ, ಶಂಕರ ಹಲಗತ್ತಿ, ಚನ್ನವೀರಗೌಡ್ರ, ಪ್ರಭು ಕುಂದರಗಿ, ಎಸ್.ಎಸ್. ದೊಡಮನಿ, ಕಸಾಪ ಪದಾಧಿಕಾರಿಗಳಾದ ಡಾ. ಜಿನದತ್ತ ಹಡಗಲಿ, ಕೆ.ಎಸ್. ಕೌಜಲಗಿ, ಇತರರು ಇದ್ದರು. ಗ್ರಾಮದ ಹಿರಿಯರಾದ ರವೀಂದ್ರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಎಫ್.ಬಿ. ಕಣವಿ, ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಆರತಿ ದೇವಶಿಖಾಮಣಿ ನಿರ್ವಹಿಸಿದರು.

    ಗೆಳೆಯನ ನೆನೆದು ಭಾವುಕ: ತಾಲೂಕು ಅಧ್ಯಕ್ಷ ಎಫ್.ಬಿ. ಕಣವಿ ಸ್ವಾಗತ ಕೋರುವಾಗ ಸುದರ್ಶನ ದೇಸಾಯಿ ಅವರನ್ನು ನೆನೆದರು. ಒಂದು ಕಾಲದಲ್ಲಿ ನಿಂಗಣ್ಣ ಕುಂಟಿಗೆ ‘ಕನ್ನಡದ ಕುಂಟಿ’ ಹಾಗೂ ಸುದರ್ಶನ ದೇಸಾಯಿಗೆ ‘ಕನ್ನಡದ ರೆಂಟಿ’ಎಂದು ಕರೆಯುತ್ತಿದ್ದರು. ಆದರೆ ಈಗ ಕನ್ನಡದ ರೆಂಟಿ ಸುದರ್ಶನ ದೇಸಾಯಿ ಇಲ್ಲ ಎಂದು ಹೇಳುತ್ತಿದ್ದಂತೆ ನಿಂಗಣ್ಣ ಭಾವುಕರಾಗಿ ಕಣ್ಣೀರಿಟ್ಟರು.

    ಗಮನ ಸೆಳೆದ ಮೆರವಣಿಗೆ: ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಯಲ್ಲಿ ಸಮ್ಮೇಳನಾಧ್ಯಕ್ಷ ನಿಂಗಣ್ಣ ಕುಂಟಿ ಚಕ್ಕಡಿಯಲ್ಲಿ ಕುಳಿತು ಸಮ್ಮೇಳನದ ವೇದಿಕೆ ತಲುಪಿದರು. ಹೆಜ್ಜೆ ಮೇಳ, ಪೂರ್ಣ ಕುಂಭ ಹೊತ್ತ ಮಹಿಳೆಯರು, ಎತ್ತಿನ ಮಜಲು ಮೇಳ ಗಮನ ಸೆಳೆದವು. ವೇದಿಕೆ ಬಳಿ ತಲುಪುತ್ತಿದ್ದಂತೆ ಸಮ್ಮೇಳನಾಧ್ಯಕ್ಷ ನಿಂಗಣ್ಣ ಕುಂಟಿ ಅವರೂ ಕುಣಿದು ಸಂಭ್ರಮಿಸಿದ್ದು ವಿಶೇಷವಾಗಿತ್ತು.

    ಮೂರು ನಿರ್ಣಯಗಳು: ತಾಲೂಕು ಸಮ್ಮೇಳನದಲ್ಲಿ ಒಟ್ಟು ಮೂರು ನಿರ್ಣಯಗಳನ್ನು ಮಂಡಿಸಲಾಯಿತು. ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸುವುದು. ಹೋಬಳಿ ಮಟ್ಟದಲ್ಲಿ ಕನ್ನಡ ಕೇಂದ್ರಗಳನ್ನು ಸ್ಥಾಪಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಒತ್ತು ನೀಡುವುದು ಹಾಗೂ ಸಾಹಿತ್ಯದ ಅಭಿರುಚಿ ಬೆಳೆಸುವ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡು ಜನರಲ್ಲಿ ಅವುಗಳ ಬಗ್ಗೆ ಜಾಗೃತಿ ಮೂಡಿಸಲು ನಿರ್ಣಯ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts