More

    ಶಿಕ್ಷಣ ಕ್ರಾಂತಿಗೆ ಮಠಗಳದ್ದು ಮಹತ್ತರ ಪಾತ್ರ

    ಪಾಂಡವಪುರ: ರಾಜ್ಯದಲ್ಲಿ ಶಾಂತಿ, ನೆಮ್ಮದಿಯ ಜತೆಗೆ ಶಿಕ್ಷಣ ಕ್ರಾಂತಿಗೆ ಮಠಗಳು ಮಹತ್ತರ ಪಾತ್ರ ವಹಿಸಿವೆ ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.


    ತಾಲೂಕಿನ ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಲಿಂಗೈಕ್ಯ ಶ್ರೀಮರಿದೇವರು ಶಿವಯೋಗಿ ಸ್ವಾಮೀಜಿಗಳ 14ನೇ ಹಾಗೂ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.


    ಮರದ ನೆರಳಿನಂತೆ ತನ್ನನ್ನು ಕಡಿಯಲು ಬಂದ ವ್ಯಕ್ತಿಗೂ ಮಠಗಳು ನೆರಳಾಗಿ ಆಶ್ರಯ ನೀಡುತ್ತಿವೆ. ಶಾಂತಿ, ನೆಮ್ಮದಿ ಜತೆಗೆ ಮಾನಸಿಕ ಸ್ಥಿರತೆ ಕೊಡುವ ತಾಣವಾಗಿವೆ. ಮಠಗಳು ಸಮಾಜ ಸೇವೆಗೆ ತಮ್ಮನ್ನು ತಾವೇ ಅರ್ಪಿಸಿಕೊಂಡು ಜನರಿಗೆ ಸಂಸ್ಕಾರದ ಪಾಠ ಕಲಿಸಿಕೊಡುತ್ತಿದೆ. ಬಹಳ ಹಿಂದಿನಿಂದಲೂ ಮಠಗಳು ಆಚರಿಸಿಕೊಂಡು ಬಂದಿರುವ ಅಕ್ಷರ ದಾಸೋಹದಿಂದ ಪ್ರೇರಣೆಯಾಗಿ ಸರ್ಕಾರದ ಅನ್ನ ದಾಸೋಹ ಯೋಜನೆ ಜಾರಿಗೆ ತಂದಿದೆ. ದಾಸೋಹ ಪರಂಪರೆಗೆ ಬಸವಣ್ಣನವರ ಕೊಡುಗೆ ಕಾರಣ ಎಂದು ತಿಳಿಸಿದರು.


    ಮನುಷ್ಯ ಮನುಷ್ಯನಾಗಿ ಹಾಗೂ ಆದರ್ಶ ವ್ಯಕ್ತಿಯಾಗಿ ಬದುಕಲು ವಚನ ಸಾಹಿತ್ಯ ಬಹಳ ಮುಖ್ಯವಾಗಿದೆ. ಮನುಷ್ಯನಿಗೆ ಅಂತರಂಗ ಮತ್ತು ಬಹಿರಂಗ ಬದುಕಿದೆ. ಬಹಿರಂಗ ಬದುಕು ಎಲ್ಲರಿಗೂ ಕಾಣುತ್ತದೆ. ಅಂತರಂಗ ಬದುಕನ್ನು ಪವಿತ್ರವಾಗಿ ಇಟ್ಟುಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮಠ ಮತ್ತು ಸಮಾಜದ ನೆಂಟು ನೀರು ಮತ್ತು ಮೀನಿನಂತೆ ಇರುತ್ತದೆ. ನೀರನ್ನು ಬಿಟ್ಟು ಮೀನು ಬದುಕುವುದಿಲ್ಲ. ಅಂತೆಯೇ ಮೀನು ಇಲ್ಲದಿದ್ದರೆ ನೀರು ಶುಚಿ ಆಗಿರುವುದಿಲ್ಲ. ಮಠಾಧೀಶರು ದೀಪದಂತೆ ತನ್ನನ್ನು ತಾನು ಸುಟ್ಟುಕೊಂಡು ಲೋಕಕ್ಕೆ ಬೆಳಕು ನೀಡಬೇಕು ಎಂದು ಹೇಳಿದರು.


    ರಾಮಯೋಗೀಶ್ವರ ಮಠದ ಶ್ರೀಮರಿದೇವರು ಮತ್ತು ಶ್ರೀಸದಾಶಿವ ಸ್ವಾಮೀಜಿ ಅವರು ಭಕ್ತರ ಉದ್ಧಾರವೇ ಸರ್ವಸ್ವ ಎಂದು ಬದುಕಿದ್ದವರು. ಆಚಾರ ಮತ್ತು ಪೂಜಾ ನಿಷ್ಟರಾಗಿ ಸರಳತೆಯಿಂದ ಬದುಕಿದ್ದರು. ಮರಿದೇವರು ಸ್ವಾಮೀಜಿ ಅವರು ಏನೂ ನುಡಿಯುತ್ತಾರೋ ಅದರಂತೆ ಘಟನೆಗಳ ಸಂಭವಿಸುತ್ತಿದ್ದವು. ಎಲ್ಲರಿಗಾಗಿ ಬದುಕಿದ್ದವರು ಯಾವಾಗಲೂ ಜೀವಂತವಾಗಿರುತ್ತಾರೆ ಎಂದರು.


    ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಈ ಕ್ಷೇತ್ರದಲ್ಲಿ ಮರಿದೇವರು ಸ್ವಾಮೀಜಿಗಳ ಪಾದಸ್ಪರ್ಶವಾದ ಮೇಲೆ ಪವಾಡಗಳು ನಡೆದಿವೆ. ಬೆಟ್ಟದ ಮೇಲಿನ ಗುಹೆ ಪ್ರವೇಶಿಸಿ ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದರು. ಅವರ ಮಾತುಗಳು ಕೊಟ್ರೆ ವರ ಇಲ್ಲಾಂದ್ರೆ ಶಾಪ ಎಂಬ ದಾಟಿಯಲ್ಲಿ ಇರುತ್ತಿದ್ದವು ಎಂದು ತಿಳಿಸಿದರು.


    ಮಠಗಳಲ್ಲಿ ರಾಜಕಾರಣವನ್ನು ಬೆರೆಸಬಾರದು. ರಾಜಕಾರಣ ಬೆರೆತರೆ ಮಠಗಳ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಮಠಕ್ಕೆ ಅವಶ್ಯಕತೆ ಇರುವ ಕೆಲಸ ಕಾರ್ಯಗಳು ಏನೇನೂ ಆಗಬೇಕು ಎಂದು ತಿಳಿಸಿದರೆ ನನ್ನಂತಹ ಭಕ್ತರು ಅದನ್ನು ನಿರ್ವಹಿಸುತ್ತಾರೆ. ಪವಿತ್ರವಾದ ಈ ಕ್ಷೇತ್ರವನ್ನು ಎರಡು ಕೋಟಿ ರೂ.ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಶಿವನ ಪ್ರತಿಮೆ, ಲಿಂಗ ಹಾಗೂ ಮಾದೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಈ ಹಣವನ್ನು ವಿನಿಯೋಗಿಸಲಾಗುವುದು. ಜತೆಗೆ 10 ಕೋಟಿ ರೂ.ಅನುದಾನದಲ್ಲಿ ಏತ ನೀರಾವರಿ ಮೂಲಕ ಈ ಭಾಗದ ಕೆರೆ ಕಟ್ಟೆಗಳನ್ನು ತುಂಬಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


    ಬಿಜೆಪಿ ಮುಖಂಡ ಡಾ.ಇಂದ್ರೇಶ್ ಮಾತನಾಡಿದರು. ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ, ಕಂಚಗಲ್ ಬಂಡೆ ಮಠದ ಬಸವಲಿಂಗಸ್ವಾಮೀಜಿ, ರಂಭಾಪುರಿ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಅವ್ವೇರಹಳ್ಳಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಸ್ವತಂತ್ರ ಚೆನ್ನವೀರ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ನಿರ್ದೇಶಕಿ ಎಸ್.ರೇಣುಕಾರಾಜು, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷ ಮಂಡಿಬೆಟ್ಟಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ನಿರಂಜನ್ ಬಾಬು, ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts