More

    ಶಿಕ್ಷಣದ ಜತೆಗೆ ಕೌಶಲವೂ ಅಗತ್ಯ

    ಮೈಸೂರು: ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಕೌಶಲ ಸಹ ಅಗತ್ಯವಾಗಿದ್ದು, ಇದರಿಂದ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.


    ಮಹಾರಾಜ ಕಾಲೇಜಿನ ಜೂನಿಯರ್ ಬಿ.ವಿ.ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಶಿಕ್ಷಣವೊಂದಿದ್ದರೆ ಸಾಲದು. ಅದರೊಂದಿಗೆ ಆಯಾ ಕೋರ್ಸ್‌ಗೆ ತಕ್ಕಂತೆ ಕೌಶಲವನ್ನು ಮೈಗೂಡಿಸಿಕೊಂಡಿರಬೇಕು. ಆಗಮಾತ್ರ ಕಲಿತ ವಿದ್ಯೆ ಹೆಚ್ಚು ಪ್ರಯೋಜನಕ್ಕೆ ಬರಲಿದೆ. ಕೌಶಲ ಕೊರತೆಯಿಂದ ವಿದ್ಯಾರ್ಥಿಗಳು ಜೀವನದಲ್ಲಿ ಹಿಂದುಳಿಯುತ್ತಿದ್ದಾರೆ ಎಂದರು.


    ಮೌಲ್ಯಧಾರಿತ ಶಿಕ್ಷಣದ ಜತೆಗೆ ಕೌಶಲಾಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮೊದಲು ಒಂದೇ ವಿಷಯ ಕುರಿತು ವಿದ್ಯಾರ್ಥಿಗಳು ಓದಬೇಕಿತ್ತು. ಆದರೀಗ ಐಚ್ಛಿಕ ವಿಷಯಗಳ ಜತೆಯಲ್ಲಿ ಇತರ ವಿಷಯಗಳ ಬಗೆಯೂ ಅಧ್ಯಯನ ಮಾಡಬೇಕಿದೆ. ಶಿಸ್ತು ಮತ್ತು ಬದ್ಧತೆಯಿಂದ ಅಧ್ಯಯನ ನಡೆಸಿದರೆ ವಿದ್ಯಾರ್ಥಿಗಳು ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.


    ಜಾಗತೀಕರಣ, ಆಧುನೀಕರಣ ಮತ್ತು ಖಾಸಗೀಕರಣದಿಂದ ಬದುಕಿನಲ್ಲಿ ಹಲವು ಸವಾಲು ಎದುರಿಸಬೇಕಾಗಿದೆ. ಇದಕ್ಕೆ ತಕ್ಕಂತೆ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ. ದೊರೆಯುವ ಅವಕಾಶಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕಾಗಿದೆ ಎಂದರು.


    ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ನೀಲಗಿರಿ ಎಂ. ತಳವಾರ ಮಾತನಾಡಿ, ಶಿಕ್ಷಣ ಎಂಬುದು ಆಪತ್ತಿನಲ್ಲಿ ಮಿತ್ರ ಇದ್ದಂತೆ. ನಡೆದರೆ ಹಸಿರು, ನಿಂತರೆ ಬರಡು ಭೂಮಿಯಾಗುತ್ತದೆ. ಯುವ ಮನಸ್ಸುಗಳು ಕುವೆಂಪು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮಾದರಿಯಾಗಿಸಿಕೊಳ್ಳಬೇಕು. ಎಂತಹ ಕಠಿಣ ಸಂದರ್ಭದಲ್ಲೂ ಮನಸ್ಸು ವಿಚಲಿತಗೊಳಿಸದೆ ತನ್ನ ಸಾಧನೆಯತ್ತ ಸಾಗುವ ತಪಸ್ಸಿನ ಜೀವನದತ್ತ ಮುನ್ನೆಡೆಯಬೇಕು ಎಂದರು.
    ಪ್ರಾಂಶುಪಾಲ ಪ್ರೊ.ಸಿ.ಎ.ಶ್ರೀಧರ್, ಆಡಳಿತಾಧಿಕಾರಿ ಪ್ರೊ.ಜಿ.ಎಚ್.ನಾಗರಾಜ, ಸ್ವಾಗತ ಸಮಿತಿ ಸಂಚಾಲಕ ಡಾ.ಬಸವರಾಜ, ಕೆ.ಬಾರಕೇರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts