More

    ಶಿಕಾರಿಪುರ: ಸರ್ಕಾರದ ಅನುಮತಿ ಇಲ್ಲದೆ ಪ್ರತಿಮೆ ಅನಾವರಣ; ಪುರಸಭೆ ಸದಸ್ಯ ಆರೋಪ

    ಶಿಕಾರಿಪುರ: ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳನ್ನು ಅನಾವರಣಗೊಳಿಸಲಾಗಿದೆ. ಆದರೆ ಇವುಗಳನ್ನು ಅನಾವರಣಗೊಳಿಸಲು ಸರ್ಕಾರದಿಂದ ಅನುಮತಿ ಪಡೆದಿಲ್ಲ ಎಂದು ಹುಲ್ಮಾರ್ ಮಹೇಶ್ ಆರೋಪಿಸಿದರು.
    ಶನಿವಾರ ಶಿಕಾರಿಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಮೆ ಅನಾವರಣ ವಿಷಯ ಪ್ರಸ್ತಾಪಿಸಿದ ಅವರು, ಈ ಬಗ್ಗೆ ಸರ್ಕಾರದಿಂದ ಯಾವುದೇ ಪತ್ರ ಪುರಸಭೆಗೆ ಬಂದಿಲ್ಲ. ಹಿಂದೆ ನಾವು ರಾಯಣ್ಣನ ಮೂರ್ತಿ ನಿಲ್ಲಿಸಿದಾಗ ಹೆದ್ದಾರಿಯ ಮೇಲಿದೆ ಎಂದು ಆಪಾದನೆ ಮಾಡಿದ್ದವರು ಅಕ್ಕಮಹಾದೇವಿ ಪ್ರತಿಯಮೆಯನ್ನು ಹೆದ್ದಾರಿಯ ಮೇಲೆ ಪ್ರತಿಷ್ಠಾಪಿಸಿರುವುದು ಸರಿಯೇ? ಮಹಾಪುರುಷರನ್ನು ಕೇವಲ ಜಾತಿಗೆ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ಇದು ಕೇವಲ ಚುನಾವಣೆಗಾಗಿ ಮಾಡಿದಂತೆ ಕಾಣುತ್ತದೆ. ನಾಲ್ಕು ಮೂರ್ತಿಗಳೂ ಅತ್ಯಂತ ಚಿಕ್ಕದಾದ ಮೂರ್ತಿಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
    ಎಸ್.ಪಿ.ನಾಗರಾಜ್ ಗೌಡ ಮಾತನಾಡಿ, ಮೂರ್ತಿಗಳನ್ನು ಪುರಸಭೆಯಿಂದಲೇ ನಿರ್ಮಾಣ ಮಾಡಬೇಕೆಂದು ಸರ್ವಾನುಮತದಿಂದ ನಿರ್ಣಯ ಮಾಡಲಾಗಿತ್ತು. ಪುರಸಭೆಯಿಂದ ಮಾಡಿದ್ದರೆ ತೆರಿಗೆ ಮೂಲಕ ಎಲ್ಲರ ಹಣವೂ ಸಂದಾಯವಾಗುತ್ತಿತ್ತು. ಕಡೇಪಕ್ಷ ಸರ್ಕಾರದ ಅನುದಾನ ಪಡೆಯಬಹುದಾಗಿತ್ತು ಎಂದರು.
    ಟಿ.ಎಸ್.ಮೋಹನ್ ಮಾತನಾಡಿ, ಕೆಲವು ಸಂದರ್ಭಗಳಲ್ಲಿ ಸರಿಯಾದ ಕುಡಿಯುವ ನೀರು ಬರುವುದಿಲ್ಲ. ಆದ್ದರಿಂದ ಜನ ದೂರು ಹೇಳುತ್ತಿದ್ದಾರೆ. ಮೊದಲು ವಾಟರ್ ಟ್ಯಾಂಕ್‌ಗಳನ್ನು ಕ್ಲೀನ್ ಮಾಡಿಸಿ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ ಎಂದು ಸಲಹೆ ನೀಡಿದರು.
    ಪ್ರಶಾಂತ್ ಜೀನಳ್ಳಿ ಮಾತನಾಡಿ, ಒಂದನೇ ವಾರ್ಡಿನಲ್ಲಿ ಪುರಸಭೆ ಯಿಂದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಅವರ ಸುಪರ್ಧಿಯಲ್ಲಿ ನಿವೇಶನವಿದ್ದು ಉಳಿದ ಜಾಗವನ್ನೂ ಅವರ ಹೆಸರಿಗೆ ಮಾಡಿಕೊಡಲು ಕಾನೂನಿನಲ್ಲಿ ಅವಕಾಶವಿದೆ. ಆ ಬಗ್ಗೆ ಗಮನಹರಿಸಿ ಎಂದರು. ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು ತಕ್ಷಣ ಪುರಸಭೆಯಿಂದ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣದ ಸಾಂಸ್ಕೃತಿಕ ಭವನದ ಸಮೀಪ ಕಟ್ಟಿದ ಮಳಿಗೆಗಳು ನಾಲ್ಕೈದು ವರ್ಷಗಳಿಂದ ಹರಾಜು ಪ್ರಕ್ರಿಯೆ ನಡೆಸದೆ ಪುರಸಭೆ ಆದಾಯಕ್ಕೆ ಕತ್ತರಿ ಬಿದ್ದಿದೆ ಎಂದು ಎಸ್.ಪಿ.ನಾಗರಾಜ್ ಗೌಡ ದೂರಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts