More

    ಶಾಲೆಗೆ ಶಿಕ್ಷಣ ಸಚಿವರ ದಿಢೀರ್ ಭೇಟಿ

    ಬೆಳಗಾವಿ: ನಗರದಲ್ಲಿನ ಸರ್ಕಾರಿ ಶಾಲೆಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ, ಶಾಲೆಯಲ್ಲಿ ಶುಚಿತ್ವ, ಮಕ್ಕಳ ಮತ್ತು ಶಿಕ್ಷಕರ ಹಾಜರಾತಿ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿ ತಪ್ಪಿತಸ್ಥ ಶಿಕ್ಷಕರಿಗೆ ಬಿಸಿ ಮುಟ್ಟಿಸಿದರು. ಅಲ್ಲದೆ, ಪೂರಕ ಪೌಷ್ಟಿಕ ಪದಾರ್ಥಗಳನ್ನು ಪೂರೈಸುವಲ್ಲಿ ಆಗುತ್ತಿರುವ ವ್ಯತ್ಯಾಸ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ವಡಗಾಂವಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಕರ ಕಾರ್ಯವೈಖರಿ, ಸಮವಸ್ತ್ರ, ಪುಸ್ತಕ ಲಭಿಸಿರುವುದನ್ನು ಖಾತರಿಪಡಿಸಿಕೊಂಡರು. ಶೈಕ್ಷಣಿಕ ಚಟುವಟಿಕೆ ಕುರಿತು ವಿದ್ಯಾರ್ಥಿ ಹಾಗೂ ಶಿಕ್ಷಕರಿಂದ ಕಲಿಕಾ ಚೇತರಿಕೆ ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನದ ಪ್ರಗತಿ ಪರಿಶೀಲಿಸಿದರು. ಜತೆಗೆ ಲೋಪದೋಷ ಕಂಡುಬಂದ ಶಿಕ್ಷಕರಿಗೆ ನೋಟಿಸ್ ನೀಡಲು ಹಾಗೂ ಶೈಕ್ಷಣಿಕ ಚಟುವಟಿಕೆ ಚುರುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ತರಗತಿಗೆ ಗೈರಾದವರಿಗೂ ಹಾಜರಿ ನೀಡಿರುವುದು ಕಂಡು ಬಂದ ಹಿನ್ನಲೆ ಇಂತಹ ತಪ್ಪುಗಳು ಮರುಕಳಿಸಬಾರದು ಎಂದು ಶಿಕ್ಷಕಿಗೆ ಸೂಚಿಸಿದರು. ತರಗತಿ ಕೊಠಡಿ, ಶೌಚಗೃಹ, ಮೈದಾನ, ಮೇಲ್ಛಾವಣಿ ಹಾಗೂ ವಿದ್ಯಾರ್ಥಿಗಳು ಕೂರುವ ಬೆಂಚ್‌ಗಳನ್ನು ಪರಿಶೀಲಿಸಿದರು. ಶೌಚಗೃಹಗಳಲ್ಲಿ ಪಾಚಿಗಟ್ಟಿದ್ದನ್ನು ಕಂಡು ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು.
    ಇದೇ ಶಾಲೆ ಆವರಣದಲ್ಲಿರುವ ಸರ್ಕಾರಿ ಪಿಯು ಕಾಲೇಜಿಗೆ ಸಚಿವರು ಭೇಟಿ ನೀಡಿ, ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಾಧನೆ ಹಾಗೂ ಸವಾಲುಗಳ ಬಗ್ಗೆ ಚರ್ಚಿಸಿದರು.

    ಈ ಸಂದರ್ಭದಲ್ಲಿ ಆಂಗ್ಲಭಾಷೆ ಉಪನ್ಯಾಸಕರ ಕೈಬರಹ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ತಾಲೂಕಿನ ಭೂತರಾಮನಹಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಗ್ರಂಥಾಲಯ, ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೋರ್ವಳು ‘ಬೆಟ್ಟದ ಮೇಲೊಂದು ಮನೆಯ ಮಾಡಿ, ಹುಲಿ-ಸಿಂಹಗಳಿಗೆ ಹೆದರಿದೊಡೆಂತಯ್ಯ…… ಎಂಬ ವಚನ ನಿರರ್ಗಳವಾಗಿ ಹೇಳಿ ಮೆಚ್ಚುಗೆಗೆ ಪಾತ್ರಳಾದಳು. ‘ಶಿಕ್ಷಕರಾಗಿ ಗ್ರಾಮೀಣ ಶಾಲೆಯಲ್ಲಿ ಪಾಠ ಮಾಡಲ್ಲ ಎಂದರೆಂತಯ್ಯ ಎಂದು ಸಾಲು ಸೇರಿಸಿಕೊ’ ಎನ್ನುವ ಮೂಲಕ ಹಾಸ್ಯದಿಂದಲೇ ಶಿಕ್ಷಕರಿಗೆ ಚಾಟಿ ಬೀಸಿದ್ದು, ವಿಶೇಷವಾಗಿತ್ತು. ಉಳಿದಂತೆ ಶಾಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಕೈಗೊಂಡಿರುವ ವಿನೂತನ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗೀಯ ಕಚೇರಿ ಅಪರ ಆಯುಕ್ತ ಎಸ್.ಎಸ್. ಬಿರಾದಾರ, ಡಿಡಿಪಿಐ ಬಸವರಾಜ ನಾಲತವಾಡ, ಬಿಸಿಯೂಟ ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಆರ್.ಸಿ.ಮುದುಕನಗೌಡರ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts