More

    ಶಾಲೆಗಳ ನಿರ್ಮಾಣ ಕುರುಬರ ಆದ್ಯತೆಯಾಗಲಿ- ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

    ದಾವಣಗೆರೆ: ಕುರುಬ ಸಮಾಜ ದೇಗುಲಗಳ ಜತೆಗೆ ಹೆಚ್ಚಿನ ವಿದ್ಯಾಲಯ, ವಿದ್ಯಾರ್ಥಿನಿಲಯಗಳನ್ನು ಕಟ್ಟಲು ಆದ್ಯತೆ ನೀಡಬೇಕು. ಭಕ್ತಿ-ಜ್ಞಾನ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
    ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಕುರುಬರಲ್ಲದೆ ಎಲ್ಲ ಹಿಂದುಳಿದ ಸಮಾಜಗಳೂ ಕೂಡ ಜ್ಞಾನ, ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದರೆ ಮಕ್ಕಳ ಜತೆಗೆ ಸಮಾಜದ ಬೆಳವಣಿಗೆ ಆಗಲಿದೆ ಎಂದರು.
    ಐಎಎಸ್, ಕೆಎಎಸ್, ಐಪಿಎಸ್ ಓದುವ ಕುರುಬ ಸಮಾಜದ ಮಕ್ಕಳಿಗೆ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ನಮ್ಮ ಮನವಿಗೆ ಸ್ಪಂದಿಸಿದ ವಸತಿ ಸಚಿವ ವಿ. ಸೋಮಣ್ಣ ಸರ್ಕಾರದಿಂದ ವಸತಿ ನಿಲಯಕ್ಕೆ 8 ಕೋಟಿ ರೂ. ಮಂಜೂರು ಮಾಡಿದ್ದು, 4 ಕೋಟಿ ರೂ. ನಮ್ಮ ಖಾತೆಗೆ ಜಮೆಯಾಗಿದೆ. ಮುಂದಿನ ತಿಂಗಳಲ್ಲಿ ಕಟ್ಟಡ ಕಾಮಗಾರಿ ಶುರುವಾಗಲಿದೆ ಎಂದರು.
    ಮೈಲಾರದ ಶಾಖಾ ಮಠದಲ್ಲಿ ವಿದ್ಯಾರ್ಜನೆಗೆ ಅನುಕೂಲವಾಗುವ ಕಟ್ಟಡದ ಉದ್ಘಾಟನೆ ಫೆ.4ರಂದು ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವರು ಎಂದ ಸ್ವಾಮೀಜಿ, 100 ದಿನ ಸಾವಿರ ಹಳ್ಳಿ ಹೆಸರಿನಲ್ಲಿ ತಾವು ಯಾತ್ರೆ ಆರಂಭಿಸಿದ್ದು ಇದುವರೆಗೆ 350 ಗ್ರಾಮಗಳನ್ನು ಭೇಟಿ ಮಾಡಿದ್ದೇವೆ. ಮುಂದಿನ ದಿನದಲ್ಲಿ ನಿಮ್ಮ ಗ್ರಾಮಕ್ಕೆ ಬಂದಾಗ ಸ್ವಾಗತ ನೀಡಿ ಎಂದು ಮನವಿ ಮಾಡಿದರು.
    ಸ್ವಾಮೀಜಿಗಳು ಜನರಲ್ಲಿ ಸಾಮರಸ್ಯ, ಸಹಬಾಳ್ವೆ ಬಿತ್ತಬೇಕು. ಬದಲಾಗಿ ತಮ್ಮದು ದೊಡ್ಡ ಸಮಾಜ, ದೊಡ್ಡ ಸ್ವಾಮಿ ಎಂಬ ಸಂಕುಚಿತತೆ ಬಿತ್ತಬಾರದು. ಜಗತ್ತಿಗೆ ಬೆಳಕು ನೀಡುವ ಸೂರ್ಯ-ಚಂದ್ರ, ದಾಹ ನೀಗಿಸುವ ಜಲಕ್ಕೆ ಕುಲವಿಲ್ಲ.
    ಕೆಲವರು ಧರ್ಮಗಳ ನಡುವೆ ಬೆಂಕಿ ಹಚ್ಚುವವರಿದ್ದಾರೆ. ಅನ್ಯ ಕೋಮಿನವರ ಜತೆ ಸೇರಬೇಡಿ, ಮಾವಿನಕಾಯಿ ನೀಡಬೇಡಿ ಎನ್ನುವ ಸ್ವಾಮೀಜಿಗಳೂ ಇದ್ದಾರೆ. ನಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ಯಾರಿಗೆ ನೀಡಬೇಕೆಂಬುದನ್ನು ಹೇಳಲು ಇವರ‌್ಯಾರು. ಇವರಿಗೆ ಅಂಥಹ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
    ಹದಡಿ ಚಂದ್ರಗಿರಿ ಮಠದ ಶ್ರೀ ಮುರಳೀಧರ ಸ್ವಾಮೀಜಿ ಮಾತನಾಡಿ ಮಾನವ ಜನ್ಮ ದೊಡ್ಡದು, ಅದನ್ನು ಒಳಿತಿಗೆ ಬಳಸಬೇಕು. ಧರ್ಮ ಕಾರ್ಯ, ಕೆರೆ-ಕಟ್ಟೆ ಮೊದಲಾದ ಪುಣ್ಯ ಕಾರ್ಯಗಳಲ್ಲಿ ತೊಡಗಬೇಕು. ಗುರು-ಶರಣರು, ಸಂತರ ದಾರಿಯಲ್ಲಿ ಸಾಗುತ್ತ ಅರಿವಿನ ಜ್ಯೋತಿ ಹಚ್ಚಬೇಕು ಎಂದು ಹೇಳಿದರು.
    ಎಪಿಎಂಸಿ ಮಾಜಿ ಸದಸ್ಯ ಕೊಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ ಇಂದು ಮೌಲ್ಯರಹಿತ ಜೀವನ ಕಾಣುತ್ತಿದ್ದೇವೆ. ಸ್ವಾಮೀಜಿಗಳ ಧರ್ಮಬೋಧನೆ ಪಾಲನೆಯಲ್ಲೂ ಹಿಂದಿದ್ದೇವೆ, ರಾಜಕಾರಣಿಗಳನ್ನು ಅನುಕರಿಸುವ ಕಾಲ ಬಂದಿದೆ. ಮತದಾನ ಕೂಡ ಹಣದ ಚಲಾವಣೆ ಮೇಲೆ ಆಧರಿತವಾಗಿದೆ. ಜನಸೇವೆ ಮಾಡುವವರಿಗೆ ಮನ್ನಣೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.
    ಕಾರ್ಯಕ್ರಮದಲ್ಲಿ ರಾಂಪುರದ ಶ್ರೀ ಹಾಲಸ್ವಾಮೀಜಿ, ಚಿತ್ರದುರ್ಗ ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಧಾ ಆಂಜಿನಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಸ್.ಬಸವಂತಪ್ಪ, ಕೆಎಸ್‌ಎಸ್ ಕಾಲೇಜು ಕಾರ್ಯದರ್ಶಿ ಎಚ್‌ಕೆ. ಬಸವರಾಜ್, ಶ್ಯಾಮ್, ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಕೆಡಿಪಿ ಸದಸ್ಯ ಅನಿಲ್‌ಕುಮಾರ್ ನಾಯ್ಕ, ಆಶುಕವಿ ಯುಗಧರ್ಮ ರಾಮಣ್ಣ, ದೇವಸ್ಥಾನ ಸಮಿತಿಯ ಶಂಕರಮೂರ್ತಿ, ಶಿವಶಂಕರ್, ಕುಬೇರಪ್ಪ, ಟಿ.ಎಚ್. ಆಂಜಿನಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts