More

    ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಸಮಾವೇಶಕ್ಕೆ ಚಾಲನೆ

    ಸಾಗರ: ಆಮಿಷ ಒಡ್ಡಿ ಮತದಾರರನ್ನು ಕೆಡಿಸಿ, ಗೆಲುವು ಸಾಧಿಸುವ ಪರಿಪಾಠ ಬೆಳೆಯುತ್ತಿರುವುದು ಎಲ್ಲರೂ ತಲೆತಗ್ಗಿಸುವಂತಾಗಿದೆ. ಮುಂದಿನ ದಿನದಲ್ಲಿ ಭಾರಿ ಪಶ್ಚಾತಾಪ ಪಡಬೇಕಾಗುತ್ತದೆ. ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರು ನಮಗೆ ಸಚ್ಚಾರಿತ್ರ್ಯದ ಬೆಳಕಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ನಗರದ ಗಾಂಧಿ ಮೈದಾನದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಂತವೇರಿ ಗೋಪಾಲಗೌಡ ಜನ್ಮ ಶತಮಾಮಾನೋತ್ಸವ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಸಮಾವೇಶವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಗೋಪಾಲಗೌಡರಿಗೆ ಸಾಗರ ಅತ್ಯಂತ ಪ್ರೀತಿಯ ಊರಾಗಿತ್ತು, ಅವರು ಚಳವಳಿಗಳಲ್ಲಿ ತೊಂಡಗಿಕೊಂಡಿದ್ದು, ಹೆಚ್ಚು ಅಧ್ಯಯನ ಶೀಲತೆಯಲ್ಲಿ ತೊಡಗಿಕೊಳ್ಳುತ್ತಿದ್ದು ಎಲ್ಲವೂ ಸಾಗರದಲ್ಲಿಯೇ ಎಂದರು.
    ಪ್ರಸ್ತುತ ರಾಜಕಾರಣ ಹಳಿತಪ್ಪಿದೆ. ಪ್ರಜಾಪ್ರಭುತ್ವ ಎಂಬ ನದಿಯ ಮೂಲವನ್ನೇ ಕೆಡೆಸಿದ್ದೇವೆ, ಗೋಪಾಲಗೌಡರು ತಮ್ಮ ವ್ಯಕ್ತಿತ್ವದ ಮೂಲಕವೇ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಅವರು ಎಷ್ಟು ಸರಳವಾಗಿದ್ದರೆಂದರೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವಾಗ ಜನರೇ ಅವರಿಗೆ ಬಸ್ಸಿನ ಟಿಕೆಟಿನ ದರವನ್ನು ಕೊಟ್ಟು ಕಳುಹಿಸುತ್ತಿದ್ದರು. ನಮ್ಮೂರಿನಲ್ಲಿ ಅಂದು ಓಡಾಡುತ್ತಿದ್ದ ಶಂಕರ ಬಸ್ಸಿನಲ್ಲಿ ಅವರಿಗೆ ಪ್ರವೇಶ ಉಚಿತವಾಗಿತ್ತು. ಗೋಪಾಲಗೌಡರು ದೈಹಿಕವಾಗಿ ನಮ್ಮ ಜತೆಯಲಿಲ್ಲ ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುವ ಕಾಲಘಟ್ಟ ಇದಾಗಿದೆ ಎಂದು ಹೇಳಿದರು.
    ಪಕ್ಷ, ಸಿದ್ಧಾಂತ ಎಲ್ಲವನ್ನು ಬದಿಗೊತ್ತಿ ಗೋಪಾಲಗೌಡ ಅವರಂತಹ ಮಹಾನ್ ನಾಯಕರನ್ನು ನಾವು ನೋಡಬೇಕು. ಪ್ರಸ್ತುತ ದಿನದಲ್ಲಿ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನೇ ಹಾಳುಮಾಡುತ್ತಿದ್ದೇವೆ. ಅಂದು ಗೋಪಾಲಗೌಡರು ತಮ್ಮ ಸಚ್ಚಾರಿತ್ರ್ಯಾವನ್ನೇ ಓರೆಹಚ್ಚಿ ರಾಜಕಾರಣದಲ್ಲಿ ಪ್ರಾಮಾಣಿಕತೆಯ ಮಹತ್ವವನ್ನು ಪರಿಚಯಿಸಿದರು. ಅವರ ಜನ್ಮ ಶತಮಾನೋತ್ಸವ ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಯುವ ಜನರಿಗೆ ಆದರ್ಶವನ್ನು ತುಂಬುವಂತಾಗಬೇಕು. ರಾಜ್ಯದ ಮುಖ್ಯಮಂತ್ರಿಗಳು ಒಂದು ಕೋಟಿ ರೂ.ಗಳನ್ನು ಇಡೀ ವರ್ಷ ಗೋಪಾಲಗೌಡರ ಜನ್ಮ ಶತಮಾನೋತ್ಸವವನ್ನು ನಡೆಸಲು ಬಿಡುಗಡೆ ಮಾಡಿದ್ದಾರೆ ಎಂದರು.
    ದಿಕ್ಸೂಚಿ ಭಾಷಣ ಮಾಡಿದ ರಮೇಶ್‌ಕುಮಾರ್ ಜತೆ ಸೆಲ್ಫಿ ತೆಗಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ನಡೆಯಿತು. ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆದು ಜನಮನ ಸೆಳೆಯಿತು.
    ನಾವೆಲ್ಲ ಮನುಷ್ಯತ್ವ ಇಲ್ಲದ ಮನುಷ್ಯರು:ನಾವೆಲ್ಲ ಮನುಷ್ಯತ್ವವೇ ಇಲ್ಲದ ಮನುಷ್ಯರಾಗಿ ಬದುಕುತ್ತಿದ್ದೇವೆ. ಓದಲು ಸಮಯವಿಲ್ಲ, ಕುಳಿತು ಕೇಳುವ ವ್ಯವಧಾನವಿಲ್ಲ, ಯಾವುದೂ ನಮಗೆ ಬೇಡ, ಹಣ ಮಾತ್ರ ಮುಖ್ಯ ಎಂದು ಮುಖ್ಯ ಭಾಷಣಕಾರರಾಗಿ ಮಾತನಾಡಿದ ವಿಧಾನ ಸಭೆಯ ಮಾಜಿ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ಒಬ್ಬ ರಾಜಕಾರಣಿ ಸಾಮಾಜಿಕ ಕಾರ್ಯಕರ್ತನಾಗಿರಬೇಕು. ಶಾಂತವೇರಿ ಗೋಪಾಲಗೌಡರಂತೆ ಆದರ್ಶವನ್ನು ಪ್ರತಿಪಾದನೆ ಮಾಡುವ ವ್ಯಕ್ತಿಗೆ ಎಂದಿಗೂ ವ್ಯಾಮೋಹವಿರಬಾರದು. ಅಂತಹ ಶ್ರೇಷ್ಠರ ಸಾಲಿನಲ್ಲಿ ಶಾಂತವೇರಿ ಗೋಪಾಲಗೌಡರು ನಿಲ್ಲುತ್ತಾರೆ. ಗೋಪಾಲಗೌಡರು ನಾಲ್ಕು ಚುನಾವಣೆಗಳನ್ನು ಎದುರಿಸಿ ಒಂದು ಚುನಾವಣೆಯಲ್ಲಿ ಸೋಲು ಕಂಡರು. ಅವರಿಗೆ ಬಡತನದ ಅರಿವು ಇತ್ತು, ಅಪಮಾನದ ಪರಿಚಯವೂ ಇತ್ತು. ಹಾಗಾಗಿ ಹೃದಯಾಂತರಾಳದಿಂದ ಮಾತನಾಡುತ್ತಿದ್ದರು. ಗೋಪಾಲಗೌಡರನ್ನು ಭೂಮಿಯ ವಿಚಾರಯೊಂದಕ್ಕೆ, ಕರ್ನಾಟಕ ರಾಜ್ಯವೊಂದಕ್ಕೇ ಸೀಮಿತಗೊಳಿಸಬಾರದು. ರಾಷ್ಟ್ರಕಂಡ ಅಪರೂಪದ ನಾಯಕರ ಸಾಲಿನಲ್ಲಿ ಗೋಪಾಲಗೌಡರದ್ದು ಅಗ್ರಮಾನ್ಯ ಸ್ಥಾನ ಎಂದರು.
    ಕಾಗೋಡು ತಿಮ್ಮಪ್ಪ ಭಾವುಕ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದೇ ನನ್ನ ಬದುಕಿನ ಅತ್ಯುನ್ಯತ ಕ್ಷಣ ಎಂದು ಭಾವುಕರಾದರು. ಅಂದು ನಾವು ನಡೆಸಿದ ಹೋರಾಟ, ತುಳಿತದ ಅರಿವು ನಿಮಗಿಲ್ಲ. ಹೋರಾಟದ ಫಲವಾಗಿ ಗೇಣಿದಾರರಾಗಿದ್ದವರು ಈಗ ಭೂ ಒಡೆಯರಾಗಿದ್ದಾರೆ. 1951ರಲ್ಲಿ ಗಣಪತಿಯಪ್ಪ ನೇತೃತ್ವದಲ್ಲಿ ಪ್ರಾರಂಭವಾದ ಕಾಗೋಡು ಸತ್ಯಾಗ್ರಹ ಗೋಪಾಲಗೌಡರು ಮತ್ತು ಸಮಾಜವಾದಿಗಳ ಪ್ರವೇಶದಿಂದ ದೇಶದ ಗಮನ ಸೆಳೆಯಿತು. ಭೂ ಶಾಸನವಾಗಿ ಪರಿಣಮಿಸಿತು. ನಾವೆಲ್ಲರೂ ಆ ಮಹಾತ್ಮ ಗೋಪಾಲಗೌಡರನ್ನು ನೆನೆಯಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts