More

    ಶರಾವತಿ ಸಂತ್ರಸ್ತರ ಒಕ್ಕಲೆಬ್ಬಿಸಲು ಬಿಡಲ್ಲ; ಭೂಹಕ್ಕು ಕೊಡಲು ಅಗತ್ಯ ಕ್ರಮ: ಶಾಸಕ ಹರತಾಳು ಹಾಲಪ್ಪ ಭರವಸೆ

    ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ಜಮೀನು ಕಳೆದುಕೊಳ್ಳುತ್ತೇವೆ ಎನ್ನುವ ಆತಂಕಪಡುವ ಅಗತ್ಯವಿಲ್ಲ. ನಾನು ಸಹ ಶರಾವತಿ ಮುಳುಗಡೆ ಸಂತ್ರಸ್ತರ ಕುಟುಂಬಕ್ಕೆ ಸೇರಿದವನು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಒದಗಿಸಲು ಒತ್ತಾಯಿಸಲಾಗುವುದು ಎಂದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿದ್ದ ಜಮೀನಿನ ಡಿನೋಟಿಫಿಕೇಷನ್ ರದ್ದು ಮಾಡಿರುವುದರ ಬಗ್ಗೆ ಕೇಂದ್ರ ಅರಣ್ಯ ಸಚಿವರ ಗಮನ ಸೆಳೆಯಲಾಗಿದೆ. ರಾಜ್ಯದಿಂದ ಬರುವ ಪ್ರಸ್ತಾವನೆಯನ್ನು ತಕ್ಷಣ ಅಂಗೀಕರಿಸಿ, ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು ಅದಕ್ಕೆ ಸಚಿವರು ಪೂಕರವಾಗಿ ಸ್ಪಂದಿಸಿದ್ದಾರೆ. ಹಿಂದಿನ ಸರ್ಕಾರಗಳು ಕೇಂದ್ರದ ಒಪ್ಪಿಗೆ ಪಡೆಯದೆ ಡಿನೋಟಿಫೀಕೇಷನ್ ಮಾಡಿದ್ದು ಪ್ರಸ್ತುತ ಸಮಸ್ಯೆಗೆ ಕಾರಣವಾಗಿದ್ದು ನ್ಯಾಯಾಲಯ ಆದೇಶ ರದ್ದು ಮಾಡಿದೆ. ಕೇಂದ್ರದಿಂದ ಒಪ್ಪಿಗೆ ಪಡೆದಿದ್ದರೆ ಡಿನೋಟಿಫಿಕೇಷನ್ ರದ್ದು ಆಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
    ಕೆಲವರು ವಿಷ ಕೊಡಿ ಎಂದು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ನಾವು ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನ ಮಾಡುತ್ತೇವೆ ಹೊರತು ಅದರಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯುವ ಕೀಳು ಮನಸ್ಥಿಯ ರಾಜಕಾರಣ ಮಾಡುವುದಿಲ್ಲ ಎಂದರು.
    ಎಲೆಚುಕ್ಕೆ ರೋಗಕ್ಕೆ ಶಾಶ್ವತ ಪರಿಹಾರ:
    ಅಡಕೆ ಎಲೆಚುಕ್ಕೆ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇವೆ. ಕೇಂದ್ರದ ನುರಿತ ವಿಜ್ಞಾನಿಗಳ ಸಿಪಿಸಿಆರ್‌ಐ ತಂಡ ಮಲೆನಾಡು ಪ್ರದೇಶಕ್ಕೆ ಶೀಘ್ರವೇ ಆಗಮಿಸಲಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಕೃಷ್ಣ ಭಟ್ ಅವರನ್ನೊಳಗೊಂಡ ನಿಯೋಗ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ, ಅಡಕೆ ಎಲೆಚುಕ್ಕೆ ರೋಗದಿಂದ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟವನ್ನು ತಿಳಿಸಲಾಗಿತ್ತು. ಇದಕ್ಕೆ ಕೇಂದ್ರ ಸಚಿವರು ತಕ್ಷಣ ಸ್ಪಂದಿಸಿ, ವಿಜ್ಞಾನಿಗಳ ತಂಡ ಕಳಿಸಲು ಸೂಚಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಸಹ ಎಲೆಚುಕ್ಕೆ, ಹಳದಿ ಎಲೆ ರೋಗದಿಂದ ಅಡಕೆ ತೋಟ ನಾಶವಾಗುತ್ತಿರುವ ಮಾಹಿತಿ ಸಚಿವರ ಗಮನಕ್ಕೆ ತಂದಿದ್ದರು. ಒಟ್ಟಾರೆ ಯಡಿಯೂರಪ್ಪ ನೇತೃತ್ವದಲ್ಲಿ ಹೋಗಿದ್ದ ನಮ್ಮ ನಿಯೋಗದ ಬೇಡಿಕೆಗೆ ಕೇಂದ್ರ ಸಚಿವರು ಸ್ಪಂದಿಸಿದ್ದಾರೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts