More

    ಶರಣರ ವಚನ ಯುವ ಪೀಳಿಗೆಗೆ ತಲುಪಲಿ


    ಯಾದಗಿರಿ
    : ಪ್ರಸ್ತುತ ಯುವ ಪೀಳಿಗೆಗೆ ಶರಣರು ರಚಿಸಿರುವ ವಚನಗಳ ಸಾರವನ್ನು ತಿಳಿಪಡಿಸುವ ಅಗತ್ಯವಿದೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಅಭಿಪ್ರಾಯಪಟ್ಟರು.

    ವೀರಶೈವ ಕಲ್ಯಾಣಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಶನಿವಾರ ಹಮ್ಮಿಕೊಂಡ ವರ್ತಮಾನದ ತಲ್ಲಣಗಳಿಗೆ ವಚನ ಸಾಂತ್ವನ ಒಂದು ದಿನದ ವಿಚಾರಣ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿನ ಎಲ್ಲ ಶರಣರು ಸಮಾಜದಲ್ಲಿ ಮನೆ ಮಾಡಿದ ಮೌಢ್ಯವನ್ನು ಬೇರು ಸಮೇತವಾಗಿ ಕಿತ್ತೆಸೆಲು ಶ್ರಮಿಸಿದ್ದಾರೆ ಎಂದರು.

    ಬಸವಣ್ಣ, ಅಲ್ಲಮ ಪ್ರಭುಗಳು, ಅಕ್ಕಮಹಾದೇವಿ ಹೀಗೆ ನೂರಾರು ಶರಣರು ತಮ್ಮ ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ್ದಾರೆ. ಹೀಗಾಗಿ ಅವರು ರಚಿಸಿದ ವಚನಗಳು ಸರ್ವಕಾಲಿಕವಾಗಿ ಉಳಿಯಬೇಕಾದರೆ ಯುವ ಪೀಳಿಗೆ ವಚನಗಳ ಅಧ್ಯಯನ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

    ಪರಿಷತ್ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಬಸವಾದಿ ಶರಣರು ಮಾಡಿದ ಬಹುದೊಡ್ಡ ಕೆಲಸವೆಂದರೆ ಸರ್ವರಿಗೂ ಸಮಾನವಾದ ಸ್ಥಾನಮಾನ ಕೊಟ್ಟಿದ್ದು, ಶರಣರು ಮನುಷ್ಯರನ್ನು ಜಾತಿಯಿಂದ ಗುರುತಿಸಲಿಲ್ಲ. ಬದಲಾಗಿ ಆತ ಮಾಡುವ ಕಾಯಕದಿಂದ ಗುರುತಿಸಿದರು. ಹಾಗೂ ಪ್ರಧಾನಮಂತ್ರಿಯಿಂದ ಹಿಡಿದು ಚಪ್ಪಲಿ ಹೊಲಿಯುವ ಕೆಲಸವೂ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ್ದಾರೆ ಎಂದರು.

    ಅನುಭವ ಮಂಟಪದಲ್ಲಿ ಕುಳಿತ ಶರಣೆ ಆಯ್ದಕ್ಕಿ ಲಕ್ಕಮ್ಮ ತನ್ನ ಗಂಡ ಮಾರಯ್ಯ ಹೆಚ್ಚು ಅಕ್ಕಿಯನ್ನು ಆಯ್ದು ತಂದಾಗ ಈಸಕ್ಕಿ ಯಾಸೆ ನಿಮಗೇಕೆ? ಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ ಎಂದು ಪ್ರಶ್ನಿಸುತ್ತಾಳೆ. ಅಲ್ಲದೆ ಈ ಆಸೆ ನಿಮ್ಮ ಮನದಲ್ಲಿ ಬರಲು ಬಸವಣ್ಣನವರು ಪರೀಕ್ಷಿಸುತ್ತಿದ್ದಾರಾ? ಎಂದು ಮರು ಪ್ರಶ್ನೆ ಹಾಕುತ್ತಾಳೆ. ಅಂದರೆ ಲಕ್ಕಮ್ಮ ಬಸವಣ್ಣನವರನ್ನೂ ಪ್ರಶ್ನಿಸುವ ಸ್ವಾತಂತ್ರೃ ಅನುಭವ ಮಂಟಪದಲ್ಲಿ ಹೆಣ್ಣು ಮಕ್ಕಳಿಗೆ ಕೊಡಲಾಗಿತ್ತು ಎಂಬುದು ವಚನಗಳಿಂದ ನಾವು ತಿಳಿದುಕೊಳ್ಳಬಹುದಾಗಿದೆ ಎಂದು ವಿವರಿಸಿದರು.

    ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ ಪ್ರಾಸ್ತಾವಿಕ ಮಾತನಾಡಿ, ಪರಿಷತ್ತು ನಡೆದುಕೊಂಡ ಬಂದ ಹಾದಿಯ ಬಗ್ಗೆ ವಿವರಿಸಿದರು. ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಎಸ್.ಎಸ್.ನಾಯಕ, ಗು.ಮೋ.ವಿಶ್ವಕರ್ಮ, ಲಿಂಗಣ್ಣ ಪಡಶೆಟ್ಟಿ, ಅಯ್ಯಣ್ಣಾ ಹುಂಡೇಕಾರ, ಡಾ.ಸುಭಾಶ್ಚಂದ್ರ ಕೌಲಗಿ, ಆರ್.ಮಹಾದೇವಪ್ಪ ಅಬ್ಬೆತಮಕೂರು, ರೇಣುಕಾ ಚಟ್ಟರಕಿ ಇತರರು ಇದ್ದರು.
    ಬಸವರಾಜ ಮೋಟ್ನಳ್ಳಿ ನಿರೂಪಿಸಿದರು. ಜಿಲ್ಲಾಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts