More

    ಶರಣರು ವೈಚಾರಿಕತೆ ಬಿತ್ತಿದ ಮಹಾತ್ಮರು

    ಬೆಳಗಾವಿ: ಹನ್ನೆರಡನೆಯ ಶತಮಾನದ ಶರಣರು ಸಮಾಜದಲ್ಲಿ ಬೀರುಬಿಟ್ಟಿದ್ದ ಮೂಢನಂಬಿಕೆ ತೊಡೆದುಹಾಕಿ ವೈಚಾರಿಕ ಪ್ರಜ್ಞೆ ಬೆಳೆಸಿದರು ಎಂದು ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.

    ನಗರದ ಲಿಂಗಾಯತ ಭವನದಲ್ಲಿ ಇತ್ತೀಚೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವಗೋಷ್ಠಿಯಲ್ಲಿ ಶರಣರ ವಚನಗಳಲ್ಲಿ ಮೂಢನಂಬಿಕೆ ವಿರೋಧ ವಿಷಯದ ಕುರಿತು ಮಾತನಾಡಿದ ಅವರು, ಪ್ರಖರ ವಿಚಾರವಾದಿಗಳಾದ ಶರಣರು ಮನುಕುಲದ ಮಾನ ಕಳೆವ, ಶೋಷಣೆ ಹಿಂಸೆಗೆ ದಾರಿ ಮಾಡಿಕೊಡುವ ಅಂಧಶ್ರದ್ಧೆ ಮತ್ತು ಅಂಧಾನುಕರಣೆಗಳನ್ನು ಖಂಡತುಂಡವಾಗಿ ಪ್ರತಿಭಟಿಸಿದರು ಎಂದರು.

    ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸಾಹುಕಾರ ಕಾಂಬಳೆ ಮಾತನಾಡಿ, ಶರಣ ತತ್ವಗಳು ವೈಜ್ಞಾನಿಕ ಮತ್ತು ವೈಚಾರಿಕ ತಳಹದಿ ಮೇಲೆ ರೂಪುಗೊಂಡಿವೆ. ಮನುಕುಲದ ಸವಾರ್ಂಗೀಣ ಕಲ್ಯಾಣಕ್ಕಾಗಿ ಬಸವಣ್ಣನವರ ನೇತೃತ್ವದಲ್ಲಿ ಹೋರಾಡಿದ ಶರಣರು ಭಯ, ಬಡತನ ಮತ್ತು ಅಜ್ಞಾನ ಮೂಲವಾದ ಮೂಢನಂಬಿಕೆ ನಿರ್ಮೂಲನೆ ಮಾಡಲು ಶ್ರಮಿಸಿದರು ಎಂದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಹನುಮಂತಪ್ಪ ಸಂಜಿವನ್ನವರ ಮಾತನಾಡಿ, ಶರಣರು ಸದಾಚಾರ ಸಂಪನ್ನತೆಯಿಂದ ವಿಜೃಂಭಿಸುವ ಸಮಾಜಕ್ಕೆ ಶ್ರಮಿಸಿದ ಮಹಾಮಾನವತಾವಾದಿಗಳು. ಮೂಢನಂಬಿಕೆಗಳ ಅರ್ಥಹೀನತೆಯನ್ನು, ಅಪಾಯವನ್ನು ಮನಗಂಡಿದ್ದ ಅವರು ಅಂಧಾನುಕರಣೆ ತೊಲಗಿಸಲು ಶ್ರಮಿಸಿದ್ದರು.

    ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ನಮ್ಮ ಜೀವನವನ್ನು ಬೆಳಗಿಸಿಕೊಳ್ಳಲು ಶರಣರು ಮೌಲ್ಯಗಳೆಂಬ ದೀಪಗಳನ್ನು ವಚನಮುಖೇನ ದಯ ಪಾಲಿಸಿದ್ದಾರೆ. ಅವುಗಳಲ್ಲಿ ವೈಚಾರಿಕತೆಯೂ ಒಂದು. ಅಂಧಶ್ರದ್ಧೆಯಿಂದ ದೂರ ಇರುವವನು ಜೀವನದಲ್ಲಿ ಸುಖಿಯಾಗಿರುತ್ತಾನೆ ಎಂದರು. ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಶುಭಾ ಎಸ್.ತೆಲಸಂಗ, ಆಶಾ ಯಮಕನಮರಡಿ, ಎಂ.ವೈ.ಮೆಣಸಿನಕಾಯಿ, ಚನಬಸಪ್ಪ ಚೊಣ್ಣದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts