More

    ಶ್ರೀಗುರು ನಿರ್ವಾಣಸ್ವಾಮಿ ಮಠದ ಜಾತ್ರೆಗೆ ವೈಭವದ ತೆರೆ

    ಚಿಕ್ಕಮಗಳೂರು: ಕೈಮರ ಸಮೀಪದ ಹೊಸಹಳ್ಳಿಯ ಶ್ರೀಗುರು ನಿರ್ವಾಣಸ್ವಾಮಿ ಮಠದಲ್ಲಿ ಶ್ರೀಮಲ್ಲೇಶ್ವರಸ್ವಾಮಿ ಹಾಗೂ ಪಲ್ಲಕ್ಕಿ ಅಮ್ಮನವರ ಬಿದಿಗೆಯ ಅಡ್ಡಪಲ್ಲಕ್ಕಿ ಉತ್ಸವ ಹತ್ತು ದಿನಗಳ ಕಾಲ ಭಕ್ತಾದಿಗಳ ಶ್ರದ್ಧಾ ಭಕ್ತಿಯೊಂದಿಗೆ ನಡೆದು ಹತ್ತುದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿ ಸಂಪನ್ನಗೊಂಡಿತು.

    ಪಶ್ಚಿಮಘಟ್ಟ ಸಾಲಿನಲ್ಲಿರುವ ಕೈಮರ ಸಮೀಪದ ಹೊಸಹಳ್ಳಿ ಶ್ರೀಗುರು ನಿರ್ವಾಣಸ್ವಾಮಿ ಮಠದಲ್ಲಿ ಒಡಮೂಡಿರುವ ಶ್ರೀಮಲ್ಲೇಶ್ವರಸ್ವಾಮಿ ಉತ್ಸವಮೂರ್ತಿಗೆ ಜಾತ್ರಾ ಮಹೋತ್ಸವದಲ್ಲಿ ವಿಶೇಷಪೂಜೆ, ರಥಸೇವೆ, ಅಭಿಷೇಕ, ಪಲ್ಲಕ್ಕಿ ಉತ್ಸವಗಳು ಧರ್ಮದರ್ಶಿ ಎನ್.ಮಹೇಶ್ ಮತ್ತು ಕಾರ್ಯದರ್ಶಿ ಎನ್.ಎಂ.ಅಜಯ್ ನೇತೃತ್ವದಲ್ಲಿ ಸಾಂಗವಾಗಿ ನೆರವೇರಿತು.
    ಬುಧವಾರ ಮಧ್ಯಾಹ್ನದ ವೇಳೆಗೆ ಹೊಸಹಳ್ಳಿ, ಮಾವಿನಹಳ್ಳಿ, ಪುಟ್ಟೇನಹಳ್ಳಿ, ತೋಟದಹಳ್ಳಿ, ಹಿತ್ತಲಮುಕ್ಕಿ ಐದೂರಿನ ಜನ ಮಠದ ಹೊರ ಆವರಣದಲ್ಲಿ ಜಾತ್ರೆ ಕಟ್ಟೆಯ ಮೇಲೆ ಗದ್ದುಗೆಯಾಗಿದ್ದ ಶ್ರೀಮಲ್ಲೇಶ್ವರಸ್ವಾಮಿಗೆ ವಿಶೇಷಪೂಜೆ, ಹಣ್ಣುಕಾಯಿ ಸೇವೆ ಸಲ್ಲಿಸಿದರು. ಸಮಯ ಸರಿದಂತೆ ಸುತ್ತಲಿನ ಊರಿನ ಜನರೊಂದಿಗೆ ಹೊರಜಿಲ್ಲೆಯ ಭಕ್ತಾದಿಗಳೂ ಆಗಮಿಸಿ ಪಲ್ಲಕ್ಕಿಹೊತ್ತು ಮಠದ ಎರಡು ಸುತ್ತು ಬಂದ ನಂತರ ಗರ್ಭಗುಡಿಯೊಳಗೆ ಉತ್ಸವಮೂರ್ತಿಯನ್ನು ಕರೆದೊಯ್ಯಲಾಯಿತು.
    ಪುಟ್ಟ ಬಾಲಕ ಕಳಸವನ್ನು ಹೊತ್ತು ಸಾಗಿದರೆ, ಹಳ್ಳಿವಾದ್ಯಕ್ಕೆ ಹೆಜ್ಜೆಹಾಕಿದ ಐದೂರು ಯುವಕರು ನಿರ್ವಾಣಸ್ವಾಮಿಗಳು ಹಾಗೂ ಮಲ್ಲೇಶ್ವರಸ್ವಾಮಿಯ ಪವಾಡಗಳನ್ನು ಪದ್ಯದ ರೂಪದಲ್ಲಿ ಹಾಡಿ ಕೊಂಡಾಡಿದರು. ಕೆಲಕಾಲ ಸುಗ್ಗಿಕುಣಿತವೂ ನಡೆಯಿತು. ಮುತ್ತೈದೆಯರ ಮಂಗಳಾರತಿಯ ನಂತರ ಬಿದಿಗೆ ಪಲ್ಲಕ್ಕಿ ಉತ್ಸವ ಪೂರ್ಣಗೊಂಡಿತು.
    ಅಮವಾಸ್ಯೆಯ ಸೋಮವಾರ ಏ. ೮ರಂದು ಧ್ವಜಾರೋಹಣದ ಬಳಿಕ ಭಕ್ತರು ಮುಡಿ ತೆಗೆಸಿಕೊಂಡರು. ಕ್ರೋಧಿನಾಮಸಂತ್ಸರ ಪಾಡ್ಯದ ಮಂಗಳವಾರ ಬೆಳಗ್ಗೆ ಶ್ರೀಸ್ವಾಮಿಯ ಅಡ್ಡಪಲ್ಲಕಿ ಉತ್ಸವ ಆರಂಭಗೊಂಡಿತ್ತು. ಅಂದು ರಾತ್ರಿ ಅಲಂಕೃತ ಅಡ್ಡಪಲ್ಲಕ್ಕಿಯನ್ನು ಐದಾರು ಕಿ.ಮೀ.ದೂರದ ಗಾಳಿಹಳ್ಳಿಮಠಕ್ಕೆ ಕರೆದೊಯ್ಯಲಾಯಿತು. ಗಾಳಿಹಳ್ಳಿ ಶ್ರೀಸಿದ್ದೇಶ್ವರಸ್ವಾಮಿ ಅಡ್ಡಪಲ್ಲಕ್ಕಿಯೊಂದಿಗೆ ಹೊಸಹಳ್ಳಿ ಪಲ್ಲಕ್ಕಿ ಹರ ತಲುಪಿದ ಎರಡು ಪಾಲ್ಲಕ್ಕಿಗಳನ್ನು ಭಕ್ತಾಧಿಗಳು ಪೂಜೆ ಸಲ್ಲಿಸಿ ಎದುರುಗೊಂಡರು. ಮಂಗಳವಾದ್ಯ ತಾರಕಕ್ಕೇರಿದಂತೆ ಎರಡೂ ಪಲ್ಲಕ್ಕಿಗಳು ಹರದತುಂಬೆಲ್ಲ ವೇಗವಾಗಿ ಸಂಚರಿಸಿ ಭಕ್ತರಿಗೆ ಆಶೀರ್ವದಿಸಿದವು. ಜಾತ್ರೆಯ ಕಟ್ಟೆಯ ಮೇಲೆ ಕೆಲಕಾಲ ಎರಡೂ ಪಲ್ಲಕ್ಕಿಗಳನ್ನಿರಿಸಿ ಪೂಜಿಸಲಾಯಿತು. ಅಲ್ಲಿಂದ ಗಾಳಿಹಳ್ಳಿ ಶ್ರೀ ಸಿದ್ದೇಶ್ವರಸ್ವಾಮಿ ಪಲ್ಲಕ್ಕಿ ಹಿಂತಿರುಗಿದರೆ ಶ್ರೀಗುರು ಮಲ್ಲೇಶ್ವರಸ್ವಾಮಿ ಪಲ್ಲಕ್ಕಿಯು ವಿವಿಧ ಗ್ರಾಮಗಳಲ್ಲಿ ಪೂಜೆ ಸ್ವೀಕರಿಸಿ ಶ್ರೀ ಗುರು ನಿರ್ವಾಣಸ್ವಾಮಿ ಹಿಂತಿರುಗುವ ವೇಳೆಗೆ ಮಧ್ಯರಾತ್ರಿ ಮೀರಿದ್ದರೂ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ. ಶ್ರೀಮಠದ ಸುತ್ತ ಪಲ್ಲಕ್ಕಿಉತ್ಸವ ಸಾಂಪ್ರದಾಯಕವಾಗಿ ನಡೆದು ಬೆಳಗಿನಜಾವ ತಪೋಕಟ್ಟೆಯ ಮೇಲೆ ಗದ್ದುಗೆಯಾಯಿತು.
    ಕೊನೆಯ ದಿನವಾದ ಬುಧವಾರ ಶ್ರೀಮಲ್ಲೇಶ್ವರಸ್ವಾಮಿ, ಶ್ರೀಪಲ್ಲಕ್ಕಿಅಮ್ಮ ಹಾಗೂ ಶ್ರೀಗುರು ನಿರ್ವಾಣಸ್ವಾಮಿಗೆ ವಿಶೇಷ ಪೂಜೆ, ನೈವೇದ್ಯ ಸಮರ್ಪಣೆ ನಂತರ ಸಿಹಿಯೂಟದ ಸಂತರ್ಪಣೆ ನಡೆಯಿತು. ಐದೂರಿನ ಗ್ರಾಮಸ್ಥರಿಗೆ ತೆಂಗಿನಕಾಯಿಯ ಗೌರವವನ್ನು ಧರ್ಮದರ್ಶಿ ಮಹೇಶ್ ಮತ್ತು ಕಾರ್ಯದರ್ಶಿ ಅಜಯ್ ಸಮರ್ಪಿಸಿ ಕೃತಜ್ಞತೆ ಸಲ್ಲಿಸಿದರು. ಸಂಜೆಯ ಪೂಜೆಯ ನಂತರ ಈವರ್ಷದ ಜಾತ್ರಾ ಮಹೋತ್ಸವ ಪೂರ್ಣಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts