More

    ಶೈಕ್ಷಣಿಕ ಮಾರ್ಗದರ್ಶನ ನೀಡಿ

    ತುಮಕೂರು: ಹಿಂದು ಸಾದರ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಿವೃತ್ತ ಅಧಿಕಾರಿಗಳು, ಹಾಲಿ ಸೇವೆಯಲ್ಲಿರುವ ಸಾಧಕರು, ಸಮಾನ ಮನಸ್ಕರು ಮಾರ್ಗದರ್ಶನ ನೀಡುತ್ತಿರುವುದು ಉತ್ತಮ ಬೆಳೆವಣಿಗೆ ಎಂದು ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಮೂರ್ತಿ ಹೇಳಿದರು.

    ನಗರದ ಹಿಂದು ಸಾದರ ಭವನದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು. 1996ರಲ್ಲಿ ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್ 25 ವರ್ಷಗಳು ಪೂರೈಸಿದೆ. ಮಾಜಿ ಸಚಿವ ಲಕ್ಷ್ಮಿನರಸಿಂಹಯ್ಯ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಸಹಕಾರವನ್ನು ಸಮುದಾಯ ಎಂದಿಗೂ ಮರೆಯುವಂತಿಲ್ಲ ಎಂದರು.

    ಬೆಂಗಳೂರಿನಲ್ಲಿ ಸಾದರ ಸಮಾನ ಮನಸ್ಕರ ಐಎಎಸ್, ಐಪಿಎಸ್ ತರಬೇತಿ ವೇದಿಕೆ ಆರಂಭಗೊಂಡ ನಂತರ, ಅದರಿಂದ ಸ್ಫೂರ್ತಿ ಪಡೆದು, ಜಿಲ್ಲೆಯ ಸಾದರ ಸಮುದಾಯದ ಮಕ್ಕಳ ಶೈಕ್ಷಣಿಕ ಬೆಳೆವಣಿಗೆಯ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಹುಟ್ಟು ಹಾಕಲಾಗಿದೆ ಎಂದರು.

    ಪ್ರತಿವರ್ಷ ಪ್ರತಿಭಾವಂತರನ್ನು ಗುರುತಿಸಿ, ಅಭಿನಂದಿಸುವುದರ ಜತೆಗೆ, ಅವಶ್ಯಕತೆ ಇರುವವರಿಗೆ ಧನ ಸಹಾಯ ಮಾಡಲಾಗುತ್ತಿದೆ. ಅಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಮೂಲಕ ಸಮುದಾಯದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

    ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಾಕೇಶ್ ಮಾತನಾಡಿ, ನೀವು ಸಾಧಕರ ಸಾಲಿನಲ್ಲಿದ್ದೀರಿ, ಇದರ ಹಿಂದೆ ನಿಮ್ಮ ತಂದೆ, ತಾಯಿಗಳ ಶ್ರಮವಿದೆ. ನಿಮ್ಮ ಬೆಳೆವಣಿಗೆಯಲ್ಲಿ ಅವರ ಸಂತೋಷವನ್ನು ಕಾಣುತ್ತಿದ್ದಾರೆ. ಹಾಗಾಗಿ ಅವರನ್ನು ಸಂತೋಷವಾಗಿಡುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.

    ಇಂದು ಎಲ್ಲದಕ್ಕೂ ಹಣವೇ ಮುಖ್ಯವಾಗಿದೆ. ಆದರೆ ಹಣ ಪುಕ್ಕಟ್ಟೆ ಯಾರು ಕೊಡುವುದಿಲ್ಲ. ಹಣಕ್ಕೆ ಬದಲಾಗಿ, ನಿಮ್ಮಲ್ಲಿರುವ ಕೌಶಲ, ಜ್ಞಾನವನ್ನು ಅವರಿಗೆ ಕೊಡಬೇಕಾಗುತ್ತದೆ. ನಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂಬ ಪಾಲಕರು ಮತ್ತು ಮಕ್ಕಳ ಆಸೆಯಿಂದಾಗಿ, ಪಾಲಕರು ಮತ್ತು ಮಕ್ಕಳ ನಡುವಿನ ಕಮ್ಯುನಿಕೇಷನ್ ಗ್ಯಾಪ್ ಹೆಚ್ಚಾಗುತ್ತಿದೆ ಎಂದರು.

    ಮಕ್ಕಳು ಕುಗ್ಗಿದಾಗ ಮೆಲ್ಲೆತ್ತುವ, ಹಿಗ್ಗಿದಾಗ ಅವರೊಂದಿಗೆ ಹಂಚಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಿ, ನಿಮ್ಮ ಮಕ್ಕಳು ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿ ದೊರೆತಂತಾಗುತ್ತದೆ ಎಂದು ಸಲಹೆ ನೀಡಿದರು.

    ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ 86 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts