More

    ವ್ಯಾಪಾರಿಯೂ ಆದ ಮಾವು ಬೆಳೆಗಾರ

    ಮುಂಡರಗಿ: ಮಾವಿನ ಫಸಲು ಕಟಾವಿಗೆ ಬಂದರೂ ಲಾಕ್​ಡೌನ್​ನಿಂದಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡಲಾಗದೆ ಪರಿತಪಿಸುತ್ತಿದ್ದ ರೈತನೊಬ್ಬರು ತಮ್ಮ ಓಮ್ನಿ ವಾಹನದಲ್ಲಿ ಮಾವು ತುಂಬಿಕೊಂಡು ಊರೂರು ಅಲೆಯುತ್ತಾ ಮಾರಾಟ ಮಾಡಿ ನಷ್ಟ ತಪ್ಪಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ.

    ತಾಲೂಕಿನ ಮುಂಡವಾಡ ಗ್ರಾಮದ ಜಿಲ್ಲಾ ಯುವ ಕೃಷಿಕ ಪ್ರಶಸ್ತಿ ಪುರಸ್ಕೃತ ರೈತ ರಮೇಶ ಕಳಕರಡ್ಡಿ ಅವರು ತಮ್ಮ 8 ಎಕರೆ ಜಮೀನಿನಲ್ಲಿ ಮಾವು ಬೆಳೆದಿದ್ದರು. ಪ್ರತಿ ವರ್ಷ ಅಂದಾಜು 25-30 ಟನ್​ನಷ್ಟು ಮಾವು ಮಾರಾಟ ಮಾಡುತ್ತಿದ್ದರು. ಗದಗ, ಕೊಪ್ಪಳ, ಬೆಂಗಳೂರು, ಮುಂಬೈ, ಗೋವಾ ಮೊದಲಾದ ಕಡೆಗಳಿಂದ ಮಾವು ವ್ಯಾಪಾರಸ್ಥರು ಬಂದು ಪ್ರತಿ ಟನ್ ಮಾವಿಗೆ 50ರಿಂದ 60 ಸಾವಿರ ರೂ. ನಂತೆ ಖರೀದಿಸುತ್ತಿದ್ದರು.

    ಆದರೆ, ಇದೀಗ ಲಾಕ್​ಡೌನ್ ಘೊಷಣೆಯಾದ ಪರಿಣಾಮ ವ್ಯಾಪಾರಸ್ಥರು ಜಮೀನಿನತ್ತ ಸುಳಿಯಲೇ ಇಲ್ಲ. ವ್ಯಾಪಾರಸ್ಥರು ಮಾವು ಖರೀದಿಗೆ ಬಾರದಿರುವುದರಿಂದ ರೈತ ರಮೇಶ ಧೃತಿಗೆಡದೇ ಸ್ವತಃ ತಾನೇ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ತಾಲೂಕು ಆಡಳಿತದಿಂದ ಹಣ್ಣುಗಳ ಮಾರಾಟಕ್ಕೆ ಪರವಾನಗಿ ಪಡೆದು ತಮ್ಮ ಸ್ವಂತ ವಾಹನದಲ್ಲಿ ಮಾವಿನ ಹಣ್ಣು ಹಾಕಿಕೊಂಡು ಮುಂಡರಗಿ ಪಟ್ಟಣ ಸೇರಿ ಮತ್ತಿತರ ಕಡೆಗಳಿಗೆ ತೆರಳಿ ಹಣ್ಣುಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

    ಯಾರಾದರೂ ತಮಗೆ ಹಣ್ಣುಗಳು ಬೇಕೆಂದು ತಿಳಿಸಿದರೆ ಅವರು ಇದ್ದಲ್ಲಿಯೇ ತೆರಳಿ ಹಣ್ಣು ಮಾರಾಟ ಮಾಡುತ್ತಾರೆ. ಕಳೆದ 20 ದಿನಗಳಿಂದ ಹಣ್ಣು ಮಾರಾಟ ಮಾಡುತ್ತಿರುವ ರೈತ ರಮೇಶ ಈಗಾಗಲೇ ಸುಮಾರು 7 ಟನ್​ನಷ್ಟು ಮಾವು ಮಾರಾಟ ಮಾಡಿದ್ದಾರೆ. ಪ್ರತಿ ಕೆಜಿ ಮಾವಿಗೆ 100 ರೂ.ನಂತೆ ಪ್ರತಿ ಟನ್​ಗೆ 1 ಲಕ್ಷ ರೂ. ಹಣ ಸಂಪಾದಿಸಿದ್ದಾರೆ.

    ವಿವಿಧ ತಳಿಯ ಹಣ್ಣು: ರೈತ ರಮೇಶ ಅವರ ತೋಟದಲ್ಲಿ ಆಪೂಸ್, ಬೇನಿಷ್, ಕೇಸರ್ ತಳಿಯ ಮಾವು ಬೆಳೆದಿದ್ದಾರೆ. ಪ್ರತಿದಿನ 5 ಕ್ವಿಂಟಾಲ್​ನಷ್ಟು ವಿವಿಧ ತಳಿಯ ಹಣ್ಣುಗಳನ್ನು ತಮ್ಮ ವಾಹನದಲ್ಲಿ ಹಾಕಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಅವರ ಕುಟುಂಬದವರು ಕೈಜೋಡಿಸಿದ್ದಾರೆ.

    ಆತ್ಮಸ್ಥೈರ್ಯ ಕಳೆದುಕೊಳ್ಳದ ರಮೇಶ: ಏ.22ರಂದು ಸುರಿದ ಗಾಳಿ ಮಳೆಗೆ ರಮೇಶ ಅವರ ತೋಟದ ಮಾವಿನ ಗಿಡದಿಂದ ಮಾವಿನ ಕಾಯಿ ಧರೆಗುರುಳಿದವು. ಅಂದಾಜು 2-3 ಟನ್​ನಷ್ಟು ಮಾವು ಗಾಳಿ ಮಳೆಯಿಂದಾಗಿ ನಷ್ಟ ಅನುಭವಿಸಿದರು. ಇದರಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದ ರೈತ ರಮೇಶ ಪ್ರತಿದಿನವು ಗಿಡದಲ್ಲಿ ಮಾವಿನಕಾಯಿ ಬಿಡಿಸಿ ಹಣ್ಣಿಗಿಟ್ಟು ಮಾರಾಟಕ್ಕೆ ತೆರಳುತ್ತಿದ್ದಾರೆ.

    ಬೇರೆ-ಬೇರೆ ಜಿಲ್ಲೆ, ರಾಜ್ಯಗಳಿಂದ ಮಾವು ಖರೀದಿಗೆ ವ್ಯಾಪಾರಸ್ಥರು ಬರುತ್ತಿದ್ದರು. ಆದರೆ ಈಗ ಲಾಕ್​ಡೌನ್​ನಿಂದ ಯಾರೂ ಬರಲಿಲ್ಲ. ಹೀಗಾಗಿ ಕುಟುಂಬದ ಸಹಕಾರದಿಂದ ನಮ್ಮ ವಾಹನದಲ್ಲಿ ಹಣ್ಣುಗಳನ್ನು ಹಾಕಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದೇನೆ. ಪ್ರತಿ ಕೆಜಿಗೆ 100 ರೂ.ಗೆ ಮಾರಾಟ ಮಾಡಿ ಉತ್ತಮ ಲಾಭ ಹೊಂದಿದ್ದು ಈಗಾಗಲೇ 7 ಟನ್​ನಷ್ಟು ಮಾವಿನ ಹಣ್ಣು ಮಾರಾಟ ಮಾಡಿದ್ದೇನೆ. ತೋಟದಲ್ಲಿ ಇನ್ನು 15 ಟನ್ ಮಾವು ಬರುವ ನಿರೀಕ್ಷೆ ಇದೆ.
    | ರಮೇಶ ಕಳಕರಡ್ಡಿ, ಮುಂಡವಾಡ ರೈತ

    ರೈತ ರಮೇಶ ಅವರು ಲಾಕ್​ಡೌನ್ ಸಮಯದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸ್ವತಃ ತಾವೇ ಹಣ್ಣು ಮಾರಾಟ ಮಾಡಿ ಉತ್ತಮ ಆದಾಯ ತಗೆಯುತ್ತಿರುವುದು ಮಾದರಿ ಕಾರ್ಯ. ವ್ಯಾಪಾರಸ್ಥರು ಬಾರದಿದ್ದರೂ ಸ್ವತಃ ರೈತರು ತಾವು ಬೆಳೆದ ಬೆಳೆಯನ್ನು ತಾವೇ ಮಾರಾಟ ಮಾಡಿದರೆ ಉತ್ತಮ ಆದಾಯ ಹೊಂದಬಹುದು. ರೈತರಿಗೆ ನಾವು ಸಹಕಾರಿಯಾಗಿ ಕಾರ್ಯ ನಿರ್ವಹಿಸುತ್ತೇವೆ.
    | ವೈ.ಎಚ್. ಜಾಲವಾಡಗಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts