More

    ವೈಯಕ್ತಿಕ ಬದುಕು ಬದಿಗಿಟ್ಟು ಸಾರ್ವಜನಿಕರ ರಕ್ಷಣೆ

    ನರಗುಂದ: ವೈದ್ಯರು ಎಂದರೆ ಪ್ರತ್ಯಕ್ಷ ದೇವರಿದ್ದಂತೆ. ಕರೊನಾ ಸಂಕಷ್ಟದ ಸಂದರ್ಭ ವೈದ್ಯರಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಪ್ರಾಣ ಉಳಿಸುವ ವೈದ್ಯರಿಗೆ ಪ್ರತಿಯೊಬ್ಬರೂ ಕೃತಜ್ಞತೆ ಸಲ್ಲಿಸುವ ಮನೋಭಾವ ಹೊಂದಬೇಕು ಎಂದು ಕನ್ನಡಪರ ಸಂಘಟನೆ ತಾಲೂಕು ಮುಖಂಡ ಚನ್ನು ನಂದಿ ಹೇಳಿದರು.

    ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ತಾಲೂಕಾಸ್ಪತ್ರೆಯ ಎಲ್ಲ ವೈದ್ಯರನ್ನು ಸತ್ಕರಿಸಿ ಅವರು ಮಾತನಾಡಿದರು.

    ಇಡೀ ಜಗತ್ತಿನಾದ್ಯಂತ ಕರೊನಾ ವೈರಸ್ ಅಟ್ಟಹಾಸ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲೂ ವೈದ್ಯರು ತಮ್ಮ ಕುಟುಂಬ ಹಾಗೂ ವೈಯಕ್ತಿಕ ಬದುಕನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಸಮರ ಸೇನಾನಿಗಳಂತೆ ಮುನ್ನುಗ್ಗುತ್ತಿದ್ದಾರೆ. ಮನುಷ್ಯ ತಾನು ಕಳೆದುಕೊಂಡ ಆರೋಗ್ಯ, ಬದುಕಿನ ಭರವಸೆಯನ್ನು ಮರಳಿ ಕೊಡುವ ಅದ್ಭುತ ಶಕ್ತಿ ವೈದ್ಯರಿಗೆ ಇದೆ. ನೊಂದಾಗ ಧೈರ್ಯ ಮತ್ತು ಆತ್ಮ ಸ್ಥೈರ್ಯ ತುಂಬುತ್ತಿರುವ ದೇವರ ಸಮಾನರಾದ ಎಲ್ಲ ವೈದ್ಯರಿಗೂ ಗೌರವ ನೀಡಬೇಕಿದೆ ಎಂದರು.

    ಡಾ. ವರುಣ ಸವದಿ ಹಾಗೂ ಡಾ. ಪ್ರವೀಣ ಮೇಟಿ ಮಾತನಾಡಿ, ವೈದ್ಯರ ದಿನಾಚರಣೆ ನಿಮಿತ್ತ ನರಗುಂದದ ಸರ್ಕಾರಿ ಆಸ್ಪತ್ರೆಯ ಎಲ್ಲ ವೈದ್ಯರನ್ನು ಸತ್ಕರಿಸಿರುವ ಕನ್ನಡಪರ ಸಂಘಟನೆಗಳ ಕಾರ್ಯ ನಮ್ಮೆಲ್ಲರ ಕರ್ತವ್ಯಮತ್ತು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕರಿಗೆ ಸರ್ಕಾರದಿಂದ ನೀಡುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

    ಚನ್ನಬಸಪ್ಪ ಕಂಠಿ, ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು. ವೈದ್ಯರಾದ ಡಾ. ಜಡೇಶ ಭದ್ರಗೌಡ್ರ, ವಿಜಯಕುಮಾರ ಜಾಧವ, ಶ್ರೀದೇವಿ ಗುನಗಾ, ಸುಪ್ರಿಯಾ ಪಾರಗೊಂಡ, ಮೌಲಾಸಾಬ್ ಠಾಣೇದ, ಭೀರಪ್ಪ ಗೊರವನಕೊಳ್ಳ, ಯೂನುಸ್ ದೊಡ್ಡಮನಿ, ವಿನೋದ ವಡ್ಡರ, ಮುತ್ತಣ್ಣ ತೋರಗಲ್ಲ ಇತರರಿದ್ದರು. ನೀಲಕಂಠ ಮಡಿವಾಳರ, ಸುರೇಶ ಹಡಪದ ನಿರ್ವಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts